Advertisement

ಬಿಎಸ್‌ವೈ ಸಿಎಂ ಮಾಡಲು ಬಿಜೆಪಿ ಸೇರ್ಪಡೆ

11:35 AM Jul 21, 2017 | Team Udayavani |

ಮೈಸೂರು: ಬಿಜೆಪಿಯಲ್ಲಿರುವ ಹಿಂದುಳಿದವರ್ಗಗಳ ನಾಯಕರ ಜತೆ ಸೇರಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವ ಮೂಲಕ ಬಿ.ಎಸ್‌.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಛಲದೊಂದಿಗೆ ಪಕ್ಷಕ್ಕೆ ಬಂದಿದ್ದೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

Advertisement

ಬಿಜೆಪಿ ಸೇರ್ಪಡೆ ನಂತರ ಇದೇ ಮೊದಲ ಬಾರಿಗೆ ಮೈಸೂರಿನ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾಗ ಪಕ್ಷದವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದ ಸಂಘಟನೆಯಂತೆ ರಾಜಕೀಯದಲ್ಲೂ ಸಂಘಟನೆಯಾಗಬೇಕು ಎಂಬ ಕಾರಣದಿಂದ 16 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದೆ. ಯಾವತ್ತಿಗೂ ಸಮಾಜ ಮತ್ತು ಸಮಾಜದ ಮುಖಂಡರನ್ನು ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ ಎಂದರು.

ವಿಶ್ವಕರ್ಮ ಸಮಾಜಕ್ಕೆ ಬಿಡಿಗಾಸು ನೀಡಿಲ್ಲ: ಯಾರಾದರೂ ಹೆಗಲ ಮೇಲೆ ಕೈಹಾಕಿ ಮಾತನಾಡಿಸಿದರೆಂದರೆ ಅವರನ್ನು ದೇವರ ರೂಪದಲ್ಲಿ ಕಾಣುತ್ತಾ ಬಹಳ ಬೇಗ ನಂಬಿ ಬಿಡುತ್ತೇವೆ, ಹಿಂದುಳಿದ ವರ್ಗದವರ ವೀಕ್‌ನೆಸ್‌ ಇದು, ಅದೇ ರೀತಿ ಸಿದ್ದರಾಮಯ್ಯ ನನ್ನ ಹೆಗಲ ಮೇಲೆ ಕೈಹಾಕಿದ್ದರಿಂದ ಅವರನ್ನು ನಂಬಿದೆ, ಗುಲಗಂಜಿಯಷ್ಟು ಅಧಿಕಾರವನ್ನೂ ಬೇಡದೆ ರಾಜಾದ್ಯಂತ ಓಡಾಡಿ 45 ಲಕ್ಷ ವಿಶ್ವಕರ್ಮ ಸಮಾಜದವರನ್ನು ಸಂಘಟಿಸಿ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದೆ. ಆದರೆ, ಸಿದ್ದರಾಮಯ್ಯರಿಂದ ಪರಮೇಶ್ವರ್‌ ವರೆಗೆ ಕಾಂಗ್ರೆಸ್‌ನ ಯಾವುದೇ ನಾಯಕರು ವಿಶ್ವಕರ್ಮ ಸಮಾಜಕ್ಕೆ ಒಂದು ರೂಪಾಯಿ ಸಹ ಕೊಡಲಿಲ್ಲ ಎಂದು ಆರೋಪಿಸಿದರು.

ಅಧಿಕಾರ ಪಡೆಯದೆ ಸಮಾಜ ಕಟ್ಟಿದೆ: ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಾಗ ಹಿಂದುಳಿದವರ್ಗದವರಾದ ನಮ್ಮ ಭಾಗ್ಯದ ಬಾಗಿಲು ತೆರೆಯಿತು ಎಂದುಕೊಂಡರೆ, ಅವರು ಅಳಿದುಳಿದ ಭಾಗ್ಯವನ್ನೂ ಕಿತ್ತುಕೊಳ್ಳಲು ಬಂದಿದ್ದು ಎಂದು ತಿಳಿದುಕೊಳ್ಳಲು ನಮಗೆ ಎಂಟು ವರ್ಷ ಬೇಕಾಯಿತು. ಹಿಂದುಳಿದ ವರ್ಗದವರನ್ನು ಬೆಳೆಸಿದರೆ 15 ವರ್ಷಗಳ ನಂತರ ದೊಡ್ಡ ನಾಯಕರಾಗಿ ಬಿಡುತ್ತಾರೆ ಎಂಬ ದೂರಾಲೋಚನೆ ಮಾಡುತ್ತಾರೆ ಸಿದ್ದರಾಮಯ್ಯ, ಅವರು ಸಮಾಜ ಕಟ್ಟದೆ ಅಧಿಕಾರ ಪಡೆದರು, ನಾನು ಅಧಿಕಾರ ಪಡೆಯದೆ ಸಮಾಜ ಕಟ್ಟಿದೆ ಎಂದರು.

ಕೈ ಕೊಟ್ಟ ಸಿಎಂ: ಎಲ್ಲ ಅರ್ಹತೆಗಳಿದ್ದರೂ ಯಾವುದೇ ಸ್ಥಾನಮಾನ ಸಿಗಲಿಲ್ಲ. 3 ವರ್ಷದ ಹಿಂದೆ ವಿಧಾನಪರಿಷತ್‌ ಸದಸ್ಯನಾಗುವ ಅವಕಾಶವಿತ್ತು, ಆಸ್ಕರ್‌ ಫ‌ರ್ನಾಂಡೀಸ್‌ ಕೈಕೊಟ್ಟರು, ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಕೈಕೊಟ್ಟರು, ಸ್ವತಃ ಮುಖ್ಯಮಂತ್ರಿಯವರೇ ತಮ್ಮ ಕಚೇರಿಯಲ್ಲಿ ನನಗೆ ಹಾರ ಹಾಕಿ ವಿಧಾನಪರಿಷತ್‌ ಸದಸ್ಯನಾಗಿ ಹೆಸರು ಅಂತಿಮಗೊಳಿಸಿರುವುದಾಗಿ ತಿಳಿಸಿದರೂ ಆರು ತಿಂಗಳ ನಂತರ ನನ್ನ ಹೆಸರು ಕೈಬಿಟ್ಟು ಬೇರೆಯವರನ್ನು ಸೇರಿಸಿದರು ಎಂದು ದೂರಿದರು.

Advertisement

ಸಿದ್ದರಾಮಯ್ಯ ಮಾತ್ರ ಸ್ವಾಭಿಮಾನವನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ?, ಅವರು ಹಳ್ಳಿಯಲ್ಲಿ ಹುಟ್ಟಿರಬಹುದು, ನಾನು ಸ್ಲಂನಲ್ಲಿ ಹುಟ್ಟಿ ಅವರಿಗಿಂತ ಬಡತನದಲ್ಲಿ ಬೆಳೆದವನು ಎಂದು ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ಧ್ವನಿ ಇಲ್ಲದ ವಿಶ್ವಕರ್ಮ ಸಮಾಜವನ್ನು ಸಂಘಟಿಸಿ ಧ್ವನಿ ನೀಡಲು ಶ್ರಮಿಸಿದವರು ಕೆ.ಪಿ.ನಂಜುಂಡಿ, ಇವರಿಂದಾಗಿ ಹಿಂದುಳಿದವರ್ಗಗಳ ಸಂಘಟನೆಗೆ ಹೆಚ್ಚು ಒತ್ತು ಸಿಕ್ಕಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಆಸ್ಕರ್‌ ಫ‌ರ್ನಾಂಡೀಸ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆಲ್ಲರೂ ನಂಜುಂಡಿ ಅವರ ಗುಣಗಾನ ಮಾಡಿದರಾದರೂ ವಿಧಾನಪರಿಷತ್‌ ಸದಸ್ಯರನ್ನಾಗಿಸದೆ ಅನ್ಯಾಯ ಮಾಡಿದರು ಎಂದರು. ಪಕ್ಷದ ಮುಖಂಡರಾದ ಎಲ್‌.ನಾಗೇಂದ್ರ, ಗೋಪಾಲ್‌ ರಾವ್‌, ಮಾರ್ಬಳ್ಳಿಮೂರ್ತಿ, ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷ ಬೋರೆಗೌಡ ತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next