Advertisement

ಮೇಯರ್‌ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಸಮಿತಿ

12:33 AM Sep 24, 2019 | Team Udayavani |

ಬೆಂಗಳೂರು: ಬಿಬಿಎಂಪಿಯ ನೂತನ ಮೇಯರ್‌, ಉಪಮೇಯರ್‌, ಆಡಳಿತ ಪಕ್ಷದ ನಾಯಕರು, 12 ಸ್ಥಾಯಿ ಸಮಿತಿಗಳಿಗೆ ಆಯ್ಕೆ ಕುರಿತಂತೆ ಪಟ್ಟಿ ಸಿದ್ಧಪಡಿಸಲು ಹಿರಿಯ ಶಾಸಕ ಎಸ್‌.ರಘು ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಸಮಿತಿ ನೀಡುವ ವರದಿ ಆಧರಿಸಿ ಮೇಯರ್‌, ಉಪಮೇಯರ್‌ ಸ್ಥಾನದ ಅಭ್ಯರ್ಥಿಗಳನ್ನು ಮುಖ್ಯಮಂತ್ರಿಗಳು ಆಯ್ಕೆ ಮಾಡಲು ತೀರ್ಮಾನವಾಗಿದೆ.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೇರಿದಂತೆ ಬೆಂಗಳೂರಿನ ಸಚಿವರು, ಸಂಸದರು, ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಬಿಬಿಎಂಪಿ ಮೇಯರ್‌, ಉಪಮೇಯರ್‌ ಸೇರಿದಂತೆ ಇತರೆ ಸ್ಥಾನಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಹಿರಿಯ ಶಾಸಕ ಎಸ್‌.ರಘು ನೇತೃತ್ವದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌.ಮುನಿರಾಜು ಅವರನ್ನು ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಯಿತು.

ಮೇಯರ್‌, ಉಪಮೇಯರ್‌, ಆಡಳಿತ ಪಕ್ಷದ ನಾಯಕರು, ಸ್ಥಾಯಿ ಸಮಿತಿಗಳಿಗೆ ಆಕಾಂಕ್ಷಿಗಳ ಅಭಿಪ್ರಾಯ, ಹಿನ್ನೆಲೆ, ಅನುಭವ, ವರ್ಚಸ್ಸು ಇತರೆ ಮಾಹಿತಿಯನ್ನು ಸಮಿತಿ ಸಂಗ್ರಹಿಸಬೇಕು. ಜತೆಗೆ ನಗರದ ಶಾಸಕರು, ಸಂಸದರು, ಕೇಂದ್ರ ಸಚಿವರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಮೂರ್‍ನಾಲ್ಕು ದಿನದಲ್ಲಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಬೇಕು. ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧಾರವಾಯಿತು. ಅದರಂತೆ ಮಂಗಳವಾರ ಸಮಿತಿ ಸಭೆ ನಡೆಸಲಿದೆ.

ಬಿಬಿಎಂಪಿಯಲ್ಲಿ ನಾಲ್ಕು ವರ್ಷ ಕಾಂಗ್ರೆಸ್‌, ಜೆಡಿಎಸ್‌ ಆಡಳಿತ ನಂತರ ಬಿಜೆಪಿಗೆ ಅಧಿಕಾರ ಹಿಡಿಯಲು ಅವಕಾಶ ಸಿಕ್ಕಿದ್ದು, ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವವರನ್ನು ಮೇಯರ್‌ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ಕುರಿತೂ ಚರ್ಚೆಯಾಯಿತು. ಸಭೆಯಲ್ಲಿದ್ದ ಹಲವು ನಾಯಕರು ಮೇಯರ್‌ ಸ್ಥಾನಕ್ಕೆ ತಮ್ಮ ಬೆಂಬಲಿಗ ಸದಸ್ಯರ ಹೆಸರು ಪ್ರಸ್ತಾಪಿಸಿ ಲಾಬಿ ನಡೆಸಿದರು. ಮೇಯರ್‌ ಸ್ಥಾನಕ್ಕೆ ಪದ್ಮನಾಭರೆಡ್ಡಿ, ಮಂಜುನಾಥರಾಜು, ಎಲ್‌.ಶ್ರೀನಿವಾಸ್‌, ಉಮೇಶ್‌ ಶೆಟ್ಟಿ ಇತರರ ಹೆಸರು ಕೇಳಿಬಂತು ಎನ್ನಲಾಗಿದೆ.

ಸೂಪರ್‌ ಸೀಡ್‌ ಬಗ್ಗೆಯೂ ಪ್ರಸ್ತಾಪ: ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಯಡಿ ಬಿಬಿಎಂಪಿ ಆಡಳಿತ ನಾಲ್ಕು ವರ್ಷದಲ್ಲಿ ಸಾಕಷ್ಟು ಹಾಳಾಗಿದೆ. ಈ ಹೊತ್ತಿನಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಸೂಕ್ತವಲ್ಲ. ಹಾಗಾಗಿ ಪಾಲಿಕೆಯನ್ನು ತಕ್ಷಣವೇ ಸೂಪರ್‌ ಸೀಡ್‌ ಮಾಡಿ ದಕ್ಷ ಅಧಿಕಾರಿಯೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಅವ್ಯವಸ್ಥೆಗಳನ್ನೆಲ್ಲಾ ಸರಿಪಡಿಸಿ ಜನರಿಗೆ ಉತ್ತಮ ಸೌಲಭ್ಯ ಸಿಗುವಂತಹ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವುದು ಸೂಕ್ತ. ಇದರಿಂದ ಪಕ್ಷದ ವರ್ಚಸ್ಸು ವೃದ್ಧಿಸಲಿದೆ ಎಂಬ ಕುರಿತೂ ಚರ್ಚೆಯಾಯಿತು ಎಂದು ಹೇಳಲಾಗಿದೆ.

Advertisement

ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಕಾರ್ಯಪ್ರವೃತ್ತರಾಗಬೇಕು. ಸಚಿವರು, ಶಾಸಕರೆಲ್ಲಾ ಒಟ್ಟಾಗಿ ಕಾರ್ಯ ನಿರ್ವಹಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಯಾವ ಹಂತದಲ್ಲೂ ಪಕ್ಷಕ್ಕೆ ಹಿನ್ನಡೆಯಾಗದಂತೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಮಿತಿಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ: ಸಭೆ ಬಳಿಕ ಪ್ರತಿಕ್ರಿಯಿಸಿದ ಸಚಿವ ಆರ್‌.ಅಶೋಕ್‌, ಬಿಬಿಎಂಪಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆ ಸಂಬಂಧ ಮುಖ್ಯಮಂತ್ರಿಗಳು ಸಭೆ ನಡೆಸಿದರು. ನಗರದ ಶಾಸಕರು, ಸಂಸದರ ಅಭಿಪ್ರಾಯ ಪಡೆದರು. ಎಲ್ಲರೂ ನಮ್ಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ಹಿರಿಯ ಶಾಸಕ ಎಸ್‌.ರಘು ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚಿಸಿದ್ದಾರೆ. ಸಮಿತಿ ಮುಂದೆಯೂ ನಮ್ಮ ಅಭಿಪ್ರಾಯ ತಿಳಿಸಲಾಗುವುದು. ಸಮಿತಿಯು ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಸೂಕ್ತರಾದವರ ಬಗ್ಗೆ ವರದಿ ಸಲ್ಲಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next