ಹುಬ್ಬಳ್ಳಿ: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಳೆದ ಏಳು ಬಾರಿ ಗೆದ್ದರೂ ಶಿಕ್ಷಕರ ಸಮಸ್ಯಗಳಿಗೆ ಸ್ಪಂದಿಸಿಲ್ಲ. ಹೀಗಾಗಿಯೇ ಅವರು ಬಿಜೆಪಿಗೆ ಬಂದಿದ್ದಾರೆ. ಇದನ್ನು ಈ ಹಿಂದೆ ನೂರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿರುತ್ತೇನೆ ಎಂದು ವಿಧಾನಪರಿಷತ್ತು ಮಾಜಿ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ವಂಚಿತರಾಗಿರುವ ಮೋಹನ ಲಿಂಬಿಕಾಯಿ ಅವರು ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಸವರಾಜ ಹೊರಟ್ಟಿ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದು ಅವರಿಗೆ ಟಿಕೆಟ್ ನೀಡಿರುವುದನ್ನು ಕೇಳಿ ಬಹಳ ಬೇಜಾರಾಯ್ತು. ಯಾವ ಉದ್ದೇಶಕ್ಕೆ ಇದನ್ನು ಮಾಡಿದರು ಎಂಬುವುದು ಇನ್ನೂ ನಿಗೂಢವಾಗಿದೆ. ಇದೊಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ. ಕಾರ್ಯಕರ್ತರು ಮಾತ್ರ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಪಕ್ಷ ತೆಗೆದುಕೊಳ್ಳವ ನಿರ್ಧಾರಕ್ಕೆ ನಾವು ಮೂಕ ಪ್ರೇಕ್ಷಕರಂತೆ ಒಪ್ಪಿಕೊಳ್ಳಬೇಕಾಗುತ್ತದೆ.
ಪಕ್ಷದ ಎಲ್ಲಾ ನಾಯಕರು ಆಶ್ವಾಸನೆ ಕೊಟ್ಟ ಹಿನ್ನೆಲೆಯಲ್ಲಿ ಮೂರು ತಿಂಗಳ ಮುಂಚಿತವಾಗಿ ಮತದಾರರ ನೋಂದಣಿ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಂಡಿದ್ದೆ. ಕಾರ್ಯಕರ್ತರು ಕೂಡ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದರು. ಶಿಕ್ಷಕರು ಬಹಳ ಶೋಷಿತರಾಗಿದ್ದಾರೆ. ಅವರ ನೋವುಗಳಿಗೆ ಸ್ಪಂದಿಸುವ ಧ್ವನಿಯಾಗಬೇಕಿದೆ. ಈ ನಿಟ್ಟಿನಲ್ಲಿ ಚುನಾವಣೆ ತಯಾರಿ ಮಾಡಿಕೊಂಡಿದ್ದೆ. ಆದರೆ ದಿಢೀರ್ ಬದಲಾವಣೆಯಿಂದ ಎಲ್ಲಾ ಕಾರ್ಯರ್ತರಿಗೆ, ಶಿಕ್ಷಕರಿಗೆ ಹಾಗೂ ನಮ್ಮೊಂದಿಗೆ ಗುರುತಿಸಿಕೊಂಡವರಿಗೂ ನಿರಾಸೆಯಾಗಿದೆ. ಯಾರೂ ಬದಲಾವಣೆ ಮಾಡಿದ್ದಾರೆ ಅವರೇ ಈ ಬಗ್ಗೆ ಹೇಳಬೇಕು. ನಂಬಿಕೆ ದ್ರೋಹ ಎಂದು ನಾನು ಹೇಳುವುದಿಲ್ಲ. ಇದನ್ನು ಮಾಡಿದವರಿಗೆ ಅರ್ಥವಾಗುತ್ತದೆ ಎಂದು ಮಾರ್ಮಿಕವಾಗಿ ಉತ್ತರಿಸಿದ ಅವರು, ಆದರೆ ಪಕ್ಷದ ನಾಯಕರು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಹಾಗೂ ನೀಡುವ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.