ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮುಗಿದ ಬೆನ್ನಲ್ಲೇ ಈಗ ರಾಜ್ಯಸಭೆ ಚುನಾವಣೆಯತ್ತ ಆಡಳಿತಾರೂಢ ಬಿಜೆಪಿ ಗಮನ ಹರಿಸಿದೆ. ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ ಒಡೆಯುವ ತಂತ್ರಗಾರಿಕೆಗೆ ಮುಂದಾಗಿದೆ.
ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿತರಾಗಿರುವ ಕುಪೇಂದ್ರ ರೆಡ್ಡಿ ತಟಸ್ಥ ಅಭ್ಯರ್ಥಿಯಾಗಿ ಸ್ಪರ್ಧಿಸಿ ದರೆ ಮಾತ್ರ ಬೆಂಬಲ ನೀಡಲು ಕಾಂಗ್ರೆಸ್ ಚಿಂತಿಸುತ್ತಿದೆ. ಒಂದೊಮ್ಮೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿ ಬಿಜೆಪಿಯ 3ನೇ ಅಭ್ಯರ್ಥಿ ಸ್ಪರ್ಧಿಸಿದರೆ ಕಣ ರಂಗೇರಲಿದೆ.
ರಾಜ್ಯಸಭೆಗೆ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯ ವಿಧಾನ ಸಭೆಯಲ್ಲಿ ಪಕ್ಷಗಳ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ಇಬ್ಬರು ಹಾಗೂ ಕಾಂಗ್ರೆಸ್‌ನಿಂದ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ನಾಲ್ಕನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮೂರು ಪಕ್ಷಗಳಲ್ಲಿ ಸಂಖ್ಯಾಬಲದ ಕೊರತೆ ಇದೆ.
45 ಮತ ಅಗತ್ಯ
ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 45 ಮತಗಳು ಅಗತ್ಯವಿದೆ. ಆಡಳಿತ ಪಕ್ಷ ಬಿಜೆಪಿಯ ಬಳಿ 120 (ಸ್ಪೀಕರ್ ಸೇರಿ) ಸದಸ್ಯರಿದ್ದು, ಬಿಎಸ್‌ಪಿಯಿಂದ ಆಯ್ಕೆಯಾಗಿರುವ ಎನ್.ಮಹೇಶ್ ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿರುವ ಎಚ್. ನಾಗೇಶ್ ಅವರೂ ಪಕ್ಷದ ಜತೆ ಗುರುತಿಸಿ ಕೊಂಡಿದ್ದರಿಂದ ಬಿಜೆಪಿಯಲ್ಲಿ ಇಬ್ಬರಿಗೆ 90 ಮತಗಳನ್ನು ಹಾಕಿದ ಬಳಿಕ 32 ಮತಗಳು ಉಳಿಯಲಿವೆ. 3ನೇ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿಗೆ 13 ಮತಗಳ ಕೊರತೆಯಾಗಲಿದ್ದು, ಅದನ್ನು ಜೆಡಿಎಸ್ ಶಾಸಕರಿಂದ ಪಡೆಯುವ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ.
Related Articles
ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿ ಕೊಳ್ಳುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಕುರಿತು ಆಲೋಚನೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆಯಾದರೂ, ಜೆಡಿಎಸ್ ಈಗಾಗಲೇ ಯಾರೊಂದಿಗೂ ಮೈತ್ರಿ ಇಲ್ಲ. ತನ್ನ ಅಭ್ಯರ್ಥಿ ಯನ್ನು ಕಣಕ್ಕಿಳಿಸಲಾಗುವುದು ಎಂದು ಘೋಷಿ ಸಿದೆ. ಆದರೆ, ಜೆಡಿಎಸ್ ಬಳಿ 32 ಮತಗಳಿದ್ದು, ಅವರಿಗೂ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲ ದೊರೆತರೆ ಮಾತ್ರ ಗೆಲ್ಲಲು ಸಾಧ್ಯವಿದೆ.ಕಾಂಗ್ರೆಸ್ ಒಬ್ಬರೇ ಅಭ್ಯರ್ಥಿ ಯನ್ನು ಕಣಕ್ಕಿಳಿ ಸಲು ನಿರ್ಧರಿಸಿರುವುದರಿಂದ ಅದರ 69 ಮತಗಳಲ್ಲಿ 24 ಮತಗಳು ಉಳಿಯುತ್ತವೆ.
ರಾಜ್ಯದವರಿಗೇ ನೀಡಲು ಮನವಿ
ರಾಜ್ಯಸಭೆಗೆ ರಾಜ್ಯದ ಮೂಲದವರಿಗೆ ಟಿಕೆಟ್ ನೀಡಬೇಕೆಂದು ರಾಜ್ಯ ಬಿಜೆಪಿ ನಾಯಕರು ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಟಿಕೆಟ್ ಬೇಡವೆಂದು ಪತ್ರ ಬರೆದ ಸುರಾನಾ
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿ ಇರುವಾಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಅವರು ತಮಗೆ ರಾಜ್ಯಸಭೆ ಟಿಕೆಟ್ ಬೇಡ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಪಕ್ಷದಲ್ಲಿ ತಮಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಕೆಲಸದ ಒತ್ತಡ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ರಾಜ್ಯಸಭೆಯ ಟಿಕೆಟ್ ಬೇಡ ಎಂದು ಸುರಾನಾ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.