Advertisement

ಸಿದ್ಧೇಶ್ವರ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲು

11:48 AM Sep 27, 2022 | Team Udayavani |

ವಿಜಯಪುರ: ಪಕ್ಷ ಸಂಘಟನೆಗಾಗಿ ಜಿಲ್ಲೆಯ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಂಗಳವಾರ ನಗರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಸಿದ್ಧೇಶ್ವರ ಶ್ರೀಗಳ ದರ್ಶನ, ಆಶೀರ್ವಾದ ಪಡೆದರು.

Advertisement

ನಗರದಲ್ಲಿರುವ ಜ್ಞಾನ ಯೋಗಾಶ್ರಮದಲ್ಲಿ ಆಯ್ದ ಕೆಲವೇ ನಾಯಕರೊಂದಿಗೆ ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ, ಶ್ರೀಗಳ ಕುಶಲೋಪರಿ ವಿಚಾರಿಸಿ ಆಶೀರ್ವಾದ ಪಡೆದರು.

ಮಾಧ್ಯಮಗಳ ಪ್ರವೇಶ ನಿರ್ಬಂಧಿಸಿ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಕಟೀಲು, ಆಶ್ರಮದಿಂದ ಹೊರ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಇದೊಂದು ಸೌಜನ್ಯದ ಭೇಟಿ ಎಂದರು.

ನಾನು ಆಧ್ಯಾತ್ಮದಿಂದ ರಾಜಕೀಯ ಪ್ರವೇಶಿಸಿದ್ದು, ಸಿದ್ಧೇಶ್ವರ ಶ್ರೀಗಳನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಭೇಟಿ ವೇಳೆ ಶ್ರೀಗಳು ಕೆಲ ಸಲಹೆ, ಸೂಚನೆ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಎರಡ್ಮೂರು ದಿನದಲ್ಲಿ ಸಂಪುಟ ವಿಸ್ತರಣೆ; ನವರಾತ್ರಿಯಲ್ಲೇ ಹಲವರಿಗೆ ಶುಭ ಯೋಗ

Advertisement

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರಲು, ಚುನಾವಣೆಗಾಗಿ ಪಕ್ಷ ಸಂಘಟನೆಗೆ ಆಗಮಿಸಿದ್ದೇನೆ. ರಾಜ್ಯದಲ್ಲಿ ವಿಧಾನಸಭೆ ಮುಂದಿನ ಚುನಾವಣೆಗಾಗಿ ಬಿಜೆಪಿ ಪಕ್ಷದ ಸಂಘಟನೆಗಾಗಿ ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ‌ ಯಡಿಯೂರಪ್ಪ‌‌ ಹಾಗೂ ನನ್ನ ನೇತೃತ್ವದಲ್ಲಿ ಮೂರು ತಂಡಗಳನ್ನು ಮಾಡಲಾಗಿದೆ. ಪ್ರತಿ ತಂಡ ತಲಾ 50 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸಹ ಪಕ್ಷ ಸಂಘಟನೆ‌ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸಿ ಚುನಾವಣಾ ಸಿದ್ಧತೆ ‌ಕುರಿತು ಪ್ರಚಾರ ಮಾಡಲಿದ್ದಾರೆ ಎಂದರು.

ಮೊದಲ ಹಂತದಲ್ಲಿ 150 ಕ್ಷೇತ್ರದಲ್ಲಿ ಪ್ರವಾಸ ಮಾಡಲಾಗುತ್ತದೆ. ದಸರಾ ಬಳಿಕ ಸಿಎಂ ನೇತೃತ್ವದಲ್ಲಿ ಪ್ರವಾಸ ಆರಂಭವಾಗಲಿದೆ. ಬೂತ್ ಮಟ್ಟದ ಬಿಎಲ್ಎ ಎರಡೆರಡು ಸಭೆ ನಡೆಸಲಾಗುತ್ತದೆ. ಬೂತ್ ಗೆದ್ದರೆ ದೇಶ ಗೆಲ್ಲತ್ತದೆ ಎಂಬ ಪರಿಕಲ್ಪನೆಯೊಂದಿಗೆ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next