ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನಕಲಿ ಧ್ವನಿಸುರುಳಿ ಬಿಡುಗಡೆಗೊಳಿಸಿದ್ದು, ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸಿನೆಮಾ ವ್ಯಕ್ತಿಯಾದ ಕುಮಾರಸ್ವಾಮಿ ಚೆನ್ನಾಗಿ ಕಥೆ ಕಟ್ಟಬಲ್ಲರಾಗಿದ್ದು, ಅದರಂತೆ ದೊಡ್ಡ ಕಥೆ ಕಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದರು.
ಸಿಎಂ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮುಖ್ಯಮಂತ್ರಿಗಳು ನಕಲಿ ಧ್ವನಿಸುರುಳಿ ಬಿಡುಗಡೆ ಮಾಡುವ ಮೂಲಕ ತಮ್ಮ ಸರಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದೊಂಬರಾಟ ನಡೆಸಿದ್ದಾರೆ. ಇದು ಶೇ. 101ರಷ್ಟು ಧ್ವನಿ ಅನುಕರಣೆ ಮಾಡಿರುವ ಧ್ವನಿಸುರುಳಿ ಎಂದು ಹೇಳಿದರು.
ಮುಖ್ಯಮಂತ್ರಿಗಳು ಆರೋಪ ಮಾಡುವಾಗ ಸಭಾಧ್ಯಕ್ಷರ ಹೆಸರು ಪ್ರಸ್ತಾವಿಸಿದ್ದು, ಒಂದೊಮ್ಮೆ ಕುಮಾರಸ್ವಾಮಿ ಆರೋಪ ಸಾಬೀತುಪಡಿಸಿದರೆ ವಿಪಕ್ಷ ನಾಯಕ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಷ್ಟೇ ಅಲ್ಲ, ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದರು.
ಸಿಎಂ ಅವರೇ ಬಿಜೆಪಿಯ ಸುಭಾಷ್ ಗುತ್ತೇದಾರ್‌ರನ್ನು ಸೆಳೆಯಲು ಯತ್ನಿಸಿದ್ದು, ಇದಕ್ಕೆದಾಖಲೆ ಬೇಕೇ? ಬಿಜೆಪಿಯ ನಾಲ್ವರು ಶಾಸಕರುನಮ್ಮೊಂದಿಗಿದ್ದಾರೆ ಎಂದು ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್. ಪುಟ್ಟರಾಜು ಬಹಿರಂಗವಾ ಗಿಯೇ ಹೇಳಿದ್ದರು ಎಂದು ಸ್ಮರಿಸಿದರು.
ಕಾಂಗ್ರೆಸ್-ಜೆಡಿಎಸ್ ಶಾಸಕರು ಮುಂಬಯಿಯಲ್ಲಿ ಇದ್ದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಸಿಎಂಗೆ ಪ್ರಾಮಾಣಿಕತೆಯಿದ್ದರೆ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳಲಿ ಎಂದು ತಿಳಿಸಿದರು.