Advertisement

ಚುನಾವಣ ಹೊಸ್ತಿಲಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದೇಕೆ?

01:06 AM Mar 16, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣ ಹೊಸ್ತಿಲಲ್ಲೇ ರಾಜ್ಯ ಬಿಜೆಪಿಯಲ್ಲಿ ಅಪಸ್ವರಗಳು ಢಾಳಾಗಿ ಕಾಣಿಸಿಕೊಳ್ಳುತ್ತಿದ್ದು, ಟಿಕೆಟ್‌ ಹಂಚಿಕೆಗೆ ಮುನ್ನವೇ ಒಡಕು ಧ್ವನಿಗಳ ಸದ್ದೇ ಹೆಚ್ಚಾಗಿ ವಿಜೃಂಭಿಸುತ್ತಿದೆ.
ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಟಿಕೆಟ್‌ ಜಗಳ ಈಗ ಬಿಜೆಪಿಯನ್ನು ತೀವ್ರವಾಗಿ ಬಾಧಿಸುತ್ತಿದ್ದು, ದಿಲ್ಲಿ ವರಿಷ್ಠರು ಬಲಿಷ್ಠವಾಗಿರುವ ಸಂದರ್ಭದಲ್ಲೇ ರಾಜ್ಯ ನಾಯಕರು ಭಿನ್ನಧ್ವನಿ ಮೊಳಗಿಸುತ್ತಿದ್ದಾರೆ. ಇದೇ ಈಗ ಕುತೂಹಲಕ್ಕೆ ಕಾರಣವಾಗಿದೆ. ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರವಾಗಬೇಕಾದ ಸಂಗತಿಗಳ ಬಗ್ಗೆ ಸ್ಥಳೀಯ ನಾಯಕರು “ಹುಕುಂ ” ಚಲಾಯಿಸುವ ರೀತಿ ಮಾತನಾಡು­ತ್ತಿದ್ದಾರೆ. ಈ ವಿಚಾರದಲ್ಲಿ ಕೆಲವರ ಮಾತು-ಕೃತಿ “ಕೀಲಿಕೊಟ್ಟ ಗೊಂಬೆಯೇನೋ?’ ಎಂಬ ಸಂಶಯವನ್ನು ಸೃಷ್ಟಿಸುತ್ತಿದ್ದು, ಸೂತ್ರಧಾರರು ಯಾರು, ಪಾತ್ರಧಾರರು ಯಾರು? ಎಂಬ ಗೊಂದಲ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ.

Advertisement

ಒಂದೆಡೆ ಸಚಿವ ವಿ.ಸೋಮಣ್ಣ ಪ್ರಕರಣ ಬಗೆಹರಿಯುವುದಕ್ಕೆ ಮುನ್ನವೇ ಶಿಕಾರಿಪುರ ಟಿಕೆಟ್‌ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಏಟು-ಇದಿರೇಟು ಪ್ರಕರಣ ಇನ್ನಷ್ಟು ಕುತೂಹಲಕ್ಕೆ ಕಾರಣ­ವಾಗಿದೆ. ಸೋಮಣ್ಣ ಸೃಷ್ಟಿಸಿದ ವಿವಾದಕ್ಕೂ ಈ ಹೇಳಿಕೆ-ಪ್ರತಿ ಹೇಳಿಕೆಗೂ “ಗೂಢ’ ಸಂಬಂಧ ಇದ್ದಿರಬಹುದೇ? ಬಾಣ ನಿರ್ದಿಷ್ಟ ಗುರಿ ತಲುಪಲಿ ಎಂಬ ಕಾರಣಕ್ಕಾಗಿಯೇ ಸೋಮಣ್ಣ ಪಕ್ಷಾಂತರ ಪ್ರಕರಣವನ್ನು ಇನ್ನೂ ಜೀವಂತ­ವಾಗಿಡಲಾಗಿದೆಯೇ ಎಂಬ ಪ್ರಶ್ನೆ ಈಗ ಕಾಡಲಾರಂಭಿಸಿದೆ.

ಬದಲಾಯ್ತಾ ವರಸೆ?: ಬಿಜೆಪಿ ಮೂಲಗಳ ಪ್ರಕಾರ, ಕಳೆದ ಕೆಲ ದಿನಗಳಿಂದೀಚೆಗೆ ಪಕ್ಷದ ಆಯಕಟ್ಟಿನ ವ್ಯಕ್ತಿಗಳು ಹಾಗೂ ದಿಲ್ಲಿ ಮಟ್ಟದ ಶಕ್ತಿಕೇಂದ್ರಗಳ ನಡುವಿನ “ಮೀಮಾಂಸೆ’ ಬದಲಾಗಿದೆ. ಇಷ್ಟು ದಿನಗಳ ಕಾಲ ಯಡಿಯೂರಪ್ಪ ಅವರ ವೇಗಕ್ಕೆ ಆಗಾಗ ರಸ್ತೆ ಉಬ್ಬು ಅಡ್ಡ ಇಡುತ್ತಿದ್ದವರು ಈಗ ಪಕ್ಷದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ವಿರೋಧ ತೋರುತ್ತಿಲ್ಲ ಎನ್ನಲಾಗಿದೆ. ವಂಶವಾದದ ವಿರುದ್ಧ “ನಿರ್ಣಾಯಕ ಯುದ್ಧ’ ಎಂಬ ವಾದವನ್ನು ಪ್ರತಿಪಾದಿಸುವ ಕೆಲವರಿಗೆ ಇದು ಇರಿಸುಮುರುಸು ಸೃಷ್ಟಿಸಿದೆ. ಹೀಗಾಗಿ “ಯಡಿ­ಯೂರಪ್ಪನವರಿಗೆ ಒಂದು ನ್ಯಾಯ, ತಮ­ಗೊಂದು ನ್ಯಾಯವೇ ?’ ಎಂದು ಬಹಿರಂಗ ಪ್ರಶ್ನೆ ಎತ್ತಿದ ಸಚಿವ ಸೋಮಣ್ಣ ಅವರಿಗೆ ಈ ಬಣ ಕೀಲಿಕೊಟ್ಟಿದೆ ಎನ್ನಲಾ ಗುತ್ತಿದೆ. ದಿಲ್ಲಿ ಮಟ್ಟದಲ್ಲಿ ಗಟ್ಟಿ ಸಂಪರ್ಕ ಹೊಂದಿರುವ ವ್ಯಕ್ತಿಗಳೇ ವರಿಷ್ಠರ ಭೇಟಿಗೆ ಸೋಮಣ್ಣ ಅವರಿಗೆ ಅವಕಾಶ ದೊರಕಿಸಿ ಕೊಟ್ಟಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿಲುವಿನ ಬಗ್ಗೆಯೂ ಪಕ್ಷದ ಆಂತರ್ಯ­ದಲ್ಲಿ ಚರ್ಚೆಗಳು ನಡೆದಿದ್ದು, ಮೂರು ಬಾರಿ ಸಿಎಂ ಸಂಧಾನ ನಡೆಸಿದ ಬಳಿಕವೂ ಸೋಮಣ್ಣ ಸಮಾಧಾನವಾಗದಿರುವ “ಮರ್ಮ’ ಸಣ್ಣ ಸಂಗತಿಯಲ್ಲ ಎಂದೇ ಹೇಳಲಾಗುತ್ತಿದೆ.

ಬೆಳಗಾವಿ ಕಲಹ: ಇದೆಲ್ಲದರ ಜತೆಗೆ ಬೆಳಗಾವಿ ಜಿಲ್ಲೆಯ ಒಳಜಗಳಕ್ಕೂ ಬಿಜೆಪಿ ಇನ್ನೂ ಮದ್ದರೆದಿಲ್ಲ. ರಮೇಶ್‌ ಜಾರಕಿಹೊಳಿ, ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಶಶಿಕಲಾ ಜೊಲ್ಲೆ ಬಣದ ಮೇಲಾಟಕ್ಕೆ ನಿಯಂತ್ರಣ ಹೇರುವುದಕ್ಕೆ ಬಿಜೆಪಿ ಇನ್ನೂ ಸಫ‌ಲವಾಗಿಲ್ಲ. ಈ ಭಾಗದಲ್ಲಿ ಕನಿಷ್ಠ ಹದಿನೈದು ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಖುದ್ದು ಅಮಿತ್‌ ಶಾ ಸೂಚನೆ ಕೊಟ್ಟು ಹೋದ ಅನಂತರವೂ ವಿವಾದ ಶಮನವಾಗಿಲ್ಲ. ಮಹೇಶ್‌ ಕುಮಟಳ್ಳಿ ಸ್ಪರ್ಧೆ ವಿಚಾರ ರಮೇಶ್‌ ಜಾರಕಿಹೊಳಿ ಹಾಗೂ ಸವದಿ ಮಧ್ಯೆ ಸದ್ದು ಮಾಡುತ್ತಲೇ ಇದೆ. ವಿಧಾನ ಪರಿಷತ್‌ ಚುನಾವಣೆ ಸಂದರ್ಭ­ದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಮಹಾಂತೇಶ್‌ ಕವಟಗಿಮಠ ಸೋಲಿನ ಸಂಗತಿ ವಿಧಾನಸಭಾ ಚುನಾವಣೆಯಲ್ಲಿ ಒಳೇಟು ನೀಡುವ ಸಾಧ್ಯತೆಯೂ ದಟ್ಟವಾಗಿದೆ.

Advertisement

ಪಂಚಮಸಾಲಿ ಮೀಸಲು ವಿಚಾರವನ್ನು ತಾರ್ಕಿಕವಾಗಿ ಪರಿಹರಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ ಎಂಬ ಭಾವ ಸಮುದಾಯದಲ್ಲಿ ದಟ್ಟವಾಗಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವ ಮುರುಗೇಶ್‌ ನಿರಾಣಿಯವರನ್ನು ತಾತ್ಕಾಲಿಕ­ವಾಗಿ ಮೌನಗೊಳಿಸಿದರೂ ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸುವ ದೊಡ್ಡ ಸಮುದಾಯದ ಬೇಡಿಕೆ ಬಗ್ಗೆ ಪಕ್ಷ ತಳೆದ ನಿಲುವಿನ ವಿರುದ್ಧ ಯಾವುದೇ ಸಂದರ್ಭದಲ್ಲಿ ಆಕ್ರೋಶ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಹಲವು ಸಮಸ್ಯೆ­ಯನ್ನು ಹೊತ್ತು ಬಿಜೆಪಿ ಚುನಾವಣೆಗೆ ಅಣಿಯಾಗಬೇಕಾದ ಸಂದರ್ಭ ಸೃಷ್ಟಿಯಾಗಿದೆ.

-ರಾಘವೇಂದ್ರ ಭಟ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next