ಬಳ್ಳಾರಿ : ಶ್ರೀರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷ ಅಯೋಧ್ಯೆಯಲ್ಲಿ ರಾಮ ಮಂದಿರದ ಜತೆ ವಾಲ್ಮೀಕಿ ದೇಗುಲವನ್ನು ನಿರ್ಮಿಸಬೇಕು ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಪಕ್ಷ ಶ್ರೀರಾಮನನ್ನು ಐಕಾನ್ ಮಾಡಿಕೊಂಡಿದೆ. ರಾಮನ ಹೆಸರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರನ್ನು ನಿರ್ಮಿಸುವುದರ ಜತೆಗೆ ವಾಲ್ಮೀಕಿ ದೇಗುಲವನ್ನು ಸಹ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಸಮುದಾಯ ನಾಲ್ಕನೇ ಅತಿದೊಡ್ಡ ಸಮುದಾಯವಾಗಿದೆ. ವಾಲ್ಮೀಕಿ ಮಹರ್ಷಿಗಳ ಎರಡನೇ ವರ್ಷದ ಜಾತ್ರಾ ಮಹೋತ್ಸವ ಇರುವ ಕಾರಣ ರಾಜ್ಯಾದ್ಯಂತ ಸುತ್ತಾಡಿ ಸಂಘಟನೆ ಮಾಡ್ತಾ ಇದ್ದೇನೆ. ವಾಲ್ಮೀಕಿ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನಕಲಿ ಜಾತಿ ಪ್ರಮಾಣ ಪತ್ರದಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕು ಎಂದು ತಿಳಿಸಿದರು.
ಮೀಸಲಾತಿ ಪ್ರಮಾಣ ಹೆಚ್ವಳಕ್ಕೆ ಒತ್ತಾಯಿಸಿ ಇತ್ತೀಚೆಗೆ ನಡೆಸಿದ ಪಾದಯಾತ್ರೆ ವೇಳೆ ರಾಜ್ಯ ಸರ್ಕಾರ ಮೀಸಲಾತಿಯನ್ನು ಶೇಕಡಾ 7.5 ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು ಎಂದ ಸ್ವಾಮೀಜಿಗಳು, ಇದಕ್ಕೆ ಸಂಬಂಧಿಸಿದಂತೆ ರಚಿಸಲಾದ ನ್ಯಾ. ನಾಗಮಹೋನ ದಾಸ ಅವರಿಗೆ ವರದಿ ನೀಡಲು ಹೇಳಿದ್ದರು. ಜನವರಿ ಮೂವತ್ತರೊಳಗೆ ವರದಿ ಸಲ್ಲಿಸುವಂತೆ ಮನವಿ ಮಾಡುತ್ತೇವೆ. ಅಲ್ಲದೇ, ಮುಂದಿನ ಫೆ.8, 9 ರಂದು ಮೀಸಲಾತಿಯನ್ನು ಘೋಷಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಸಮುದಾಯದವರು ಮೀಸಲಾತಿ ಅನುಭವಿಸಿ ಅಭಿವೃದ್ಧಿಯಾದವರು, ಬೇರೆಯವರಿಗೆ ಅವಕಾಶ ಕೊಡಬೇಕೆಂದು ಕೋರಿದ ಸ್ವಾಮೀಜಿಗಳು, ಅಭಿವೃದ್ಧಿಯಾದವರು ತ್ಯಾಗ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸವಲತ್ತು ಸಿಗಬೇಕು. ಜಾತಿಯಿಂದ ಗೆದ್ದವರು ಜನರ ಧ್ವನಿಯಾಗಿ ಮಾತನಾಡಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸದಿದ್ದರೆ ಸಮುದಾಯದ ಎಲ್ಲ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವಂತೆ ಹೋರಾಟದ ವೇಳೆ ಹೇಳಿದ್ದೇನೆ. ಅಂದಿನ ವೇದಿಕೆಯಲ್ಲಿ ಪಕ್ಷಾತೀತವಾಗಿ ರಾಜೀನಾಮೆ ನೀಡಲು ಸಮುದಾಯದ ಜನಪ್ರತಿನಿಧಿಗಳು ಸಮ್ಮತಿ ಸೂಚಿಸಿದ್ದರು. ಮುಖ್ಯಮಂತ್ರಿಗಳು ಸಹ ಮೀಸಲಾತಿ ನೀಡೋ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿಯವರು ವಾಲ್ಮೀಕಿ ಸಮುದಾಯವನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ಹಾಗಾಗಿ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಇದ್ದರು.