Advertisement

ಬಿಜೆಪಿಯಲ್ಲಿ ದುಡಿದವರಿಗಿಂತಲೂ ದುಡ್ಡಿದ್ದವರಿಗೆ ಬೆಲೆ: ಮಾಜಿ ಶಾಸಕ ವಾಲ್ಮೀಕಿ ಕಣ್ಣೀರು

10:39 PM Feb 02, 2021 | Team Udayavani |

ವಾಡಿ (ಕಲಬುರಗಿ): ಶೂನ್ಯ ಸ್ಥಾನದಲ್ಲಿದ್ದ ಕಮಲ ಪಕ್ಷಕ್ಕೆ ೩೩ ವರ್ಷಗಳ ಕಾಲ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸಿದ್ದೇನೆ. ನನ್ನ ಇಡೀ ಕುಟುಂಬ ಪಕ್ಷಕ್ಕೆ ಒತ್ತೆಯಿಟ್ಟು ಈಗ ಕಂಗಾಲಾಗಿದ್ದೇನೆ. ದುಡಿದವರಿಗಿಂತ ದುಡ್ಡಿದ್ದವರಿಗೆ ಹೆಚ್ಚು ಬೆಲೆ ಎಂಬ ವಾತಾವರಣ ಪಕ್ಷದಲ್ಲಿ ಸೃಷ್ಠಿಯಾಗಿದೆ. ನಿಷ್ಠಾವಂತ ನಾಯಕರು ಮೂಲೆಗುಂಪಾಗುತ್ತಿದ್ದಾರೆ. ನನ್ನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸ್ಥಾನಮಾನ ನೀಡಬೇಕಾದ ಹೈಕಮಾಂಡ್ ಕಡೆಗಣಿಸಿದೆ ಎಂದು ಚಿತ್ತಾಪುರ ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಅತೃಪ್ತಿ ಹೊರಹಾಕಿದ್ದಾರೆ.

Advertisement

ಮಂಗಳವಾರ ವಾಡಿ ನಗರದ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದು ತಮ್ಮದೇ ಪಕ್ಷದ ವಿರುದ್ಧ ಅಸಮಾದಾನ ವ್ಯಕ್ತಪಡಿಸಿರುವ ವಾಲ್ಮೀಕಿ, ಕೃಷಿ-ಕೂಲಿ ಕಾರ್ಮಿಕರ ಕುಟುಂಬದಿಂದ ಬಂದು ಪಕ್ಷಕ್ಕಾಗಿ ಎಲ್ಲವೂ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ನನಗೆ ಯಡಿಯೂರಪ್ಪ ಕೈ ಹಿಡಿಯಲಿಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಸೇರಿದವರನ್ನು ನಿಗಮ ಮಂಡಳಿಗೆ ನೇಮಿಸಲಾಗಿದೆ. ನಾನೇನು ದ್ರೋಹ ಮಾಡಿದ್ದೆ ಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ:ಹೊಲದಲ್ಲಿ ಬಿದ್ದಿದ್ದ ನಿರ್ಗತಿಕನ ಶವ ಹೊತ್ತು 1 ಕಿ.ಮಿ. ಸಾಗಿದ ಮಹಿಳಾ ಎಸ್‌ಐ

ಪಕ್ಷಕ್ಕಾಗಿ ನಾನು ಬಹಳ ಸಫರ್ ಆಗಿದ್ದೇನೆ. ಹೋರಾಟ ಮಾಡಿ ಜೈಲು ಅನುಭವಿಸಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಐದು ಸಾವಿರ ಮತಗಳ ಲೀಡ್ ಕೊಟ್ಟಿದ್ದೇನೆ. ನನ್ನ ಹತ್ತಿರ ಹಣವಿಲ್ಲ, ಆದರೆ ಜನ ಬೆಂಬಲವಿದೆ. ಪಕ್ಷದ ವಿರುದ್ಧ ಎಂದೂ ಮಾತನಾಡಿದವನಲ್ಲ. ಯಡಿಯೂರಪ್ಪನವರನ್ನು ನಮ್ಮ ಮನೆದೇವರಂತೆ ಪೂಜಿಸಿಕೊಂಡು ಬಂದಿದ್ದೇನೆ. ಅವರ ಮೇಲೆ ತುಂಬಾ ಭರವಸೆಯಿಟ್ಟು ನೋವುಗಳನ್ನು ಸಹಿಸಿಕೊಂಡಿದ್ದೆ. ಆದರೂ ಪಕ್ಷ ನನ್ನನ್ನು ಗುರುತಿಸಲಿಲ್ಲ. ನಿಗಮ-ಮಂಡಳಿ ಸ್ಥಾನಕ್ಕೆ ನನ್ನನ್ನೂ ಪರಿಗಣಿಸಿ ಎಂದು ಕೇಳುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಹೇಳುವ ಮೂಲಕ ವಾಲ್ಮೀಕಿ ಭಾವುಕರಾದರು.

ರಾಜಕೀಯದಲ್ಲಿ ನನಗೆ ಯಾರೂ ಗಾಡ್ ಫಾದರ್‌ಗಳಿಲ್ಲ. ನನ್ನ ಸ್ವಂತ ಬಲದ ಮೇಲೆ ಬೆಳೆದು ಪಕ್ಷವನ್ನು ವಾಡಿ-ನಾಲವಾರ ವಲಯದ ಮನೆ ಮನೆಗೂ ತಲುಪಿಸಿದ್ದೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರೇ ನನಗೆ ಗಾಡ್ ಫಾದರ್. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರಕಾರಗಳಿದ್ದರೂ ಅಧಿಕಾರ ಸ್ಥಾನಮಾನದದಿಂದ
ವಂಚಿತನಾಗಿದ್ದೇನೆ. ಐದು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. ಒಮ್ಮೆ ಉಪ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಗೆದ್ದಿದ್ದೇನೆ. ನನ್ನ ಜೀವಮಾನದಲ್ಲಿ ಒಮ್ಮೆಯೂ ಕಾಂಗ್ರೆಸ್‌ಗೆ ಮತ ಹಾಕಿದವನಲ್ಲ. ಬಿಜೆಪಿ ಪಕ್ಷವನ್ನು ತಾಯಿಯಂತೆ ಪ್ರೀತಿಸಿದ್ದೇನೆ. ಇಂತಹ ಪಕ್ಷದಲ್ಲಿ ಈಗ ನನ್ನ ವಿರುದ್ಧವೇ ತಂತ್ರಗಾರಿಕೆ ನಡೆಯುತ್ತಿದೆ ಎಂದರು.

Advertisement

ಇದನ್ನೂ ಓದಿ:ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಅಪರಾಧಿ ಮಧುಕರ್‌ ರೆಡ್ಡಿಗೆ ಶಿಕ್ಷೆ

ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಚಿತ್ತಾಪುರ ವಿಧಾನಸಭೆಗೆ ಸ್ಪರ್ಧಿಸಲು ಈಗಿನಿಂದಲೇ ಪೈಪೋಟಿ ಶುರುವಾಗಿದೆ. ಪಕ್ಷ ಎಂದ ಮೇಲೆ ಸಹಜವಾಗಿ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ. ಚುನಾವಣೆ ವೇಳೆ ಟಿಕೇಟ್ ಯಾರಿಗೆ ನೀಡಬೇಕು ಎಂಬುದು ಹೈಕಮಾಂಡ್ ತೀರ್ಮಾನಿಸುತ್ತದೆ. ಅದಕ್ಕೆ ನಾನು ಈಗ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಹಣದಿಂದ ವೀಕ್ ಇರಬಹುದು, ಜನ ಬಲದಿಂದ ಬಲಿಷ್ಠವಾಗಿದ್ದೇನೆ. ನಮ್ಮವರೇ ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿದರೆ ಸುಮ್ಮನಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿರುವ ವಾಲ್ಮೀಕಿ ನಾಯಕ, ರಾಜ್ಯ ಅಥವಾ ಕೇಂದ್ರ ಸರಕಾರದ ಆಡಳಿತದಲ್ಲಿ ನನಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ನ್ಯಾಯ ಸಿಗದಿದ್ದರೆ ಮುಂದಿನ ನಡೆ ಪ್ರಕಟಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next