Advertisement

Anantkumar Hegde ಹೇಳಿಕೆ ವಿರುದ್ಧ ಖರ್ಗೆ, ರಾಹುಲ್ ಸೇರಿ ಕಾಂಗ್ರೆಸ್ ನಾಯಕರ ಆಕ್ರೋಶ

07:05 PM Mar 10, 2024 | Team Udayavani |

ಬೆಂಗಳೂರು: ‘ಸಂವಿಧಾನವನ್ನು ತಿದ್ದುಪಡಿ ಮಾಡಲು ತಮ್ಮ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ’ ಎಂದುಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನೀಡಿರುವ ಕುರಿತು ”ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ಮರು ಬರೆಯುವ ಮತ್ತು ನಾಶಮಾಡುವ ಅಜೆಂಡಾವನ್ನು ಹೊಂದಿದೆ” ಎಂದು ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ.

Advertisement

ಅನಂತಕುಮಾರ ಹೆಗಡೆ ಅವರು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ, ಸಂವಿಧಾನವನ್ನು ತಿದ್ದುಪಡಿ ಮಾಡಲು, ಕಾಂಗ್ರೆಸ್ ಮಾಡಿದ ವಿರೂಪಗಳು ಮತ್ತು ಅನಗತ್ಯ ಸೇರ್ಪಡೆಗಳನ್ನು ಸರಿಪಡಿಸಲು ಬಿಜೆಪಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ” ಎಂದಿದ್ದರು.

ಹೆಗಡೆ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ಗುಪ್ತ ಉದ್ದೇಶಗಳ ಸಾರ್ವಜನಿಕ ಘೋಷಣೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

”ಬಾಬಾ ಸಾಹೇಬರ ಸಂವಿಧಾನವನ್ನು ನಾಶಪಡಿಸುವುದೇ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ. ಅವರು ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ. ಸಮಾಜವನ್ನು ವಿಭಜಿಸುವ ಮೂಲಕ, ಮಾಧ್ಯಮವನ್ನು ಗುಲಾಮರನ್ನಾಗಿ ಮಾಡುವ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ, ವಿರೋಧವನ್ನು ತೊಡೆದುಹಾಕಲು ಸಂಚು ರೂಪಿಸುವ ಮೂಲಕ ಭಾರತದ ಮಹಾನ್ ಪ್ರಜಾಪ್ರಭುತ್ವವನ್ನು ಸಂಕುಚಿತ ಸರ್ವಾಧಿಕಾರವಾಗಿ ಪರಿವರ್ತಿಸಲು ಅವರು ಬಯಸುತ್ತಾರೆ ”ಎಂದು ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದ ವೀರರ ಕನಸುಗಳೊಂದಿಗಿನ ಪಿತೂರಿಗಳಲ್ಲಿ ಅವರು ಯಶಸ್ವಿಯಾಗಲು ಬಿಡುವುದಿಲ್ಲ ಮತ್ತು ಕೊನೆಯ ಉಸಿರು ಇರುವವರೆಗೂ ಸಂವಿಧಾನವು ಖಾತರಿಪಡಿಸುವ ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ ಎಂದು ರಾಹುಲ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಹೇಳಿಕೆಯು ಸರ್ವಾಧಿಕಾರವನ್ನು ಹೇರುವ ಮೋದಿ-ಆರ್‌ಎಸ್‌ಎಸ್‌ನ ವಂಚಕ ಅಜೆಂಡಾವನ್ನು ಮತ್ತೊಮ್ಮೆ ಬಹಿರಂಗಪಡಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

“ಮೋದಿ ಸರ್ಕಾರ, ಬಿಜೆಪಿ ಮತ್ತು ಆರ್‌ಎಸ್‌ಎಸ್ ರಹಸ್ಯವಾಗಿ ಸರ್ವಾಧಿಕಾರವನ್ನು ಹೇರಲು ಬಯಸುತ್ತವೆ, ಆ ಮೂಲಕ ಅವರು ತಮ್ಮ ‘ಮನುವಾದಿ ಮನಸ್ಥಿತಿ’ಯನ್ನು ಭಾರತದ ಜನರ ಮೇಲೆ ಹೇರುತ್ತಾರೆ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

”ಕಾಲಕಾಲಕ್ಕೆ ಬಿಜೆಪಿ-ಆರ್‌ಎಸ್‌ಎಸ್‌ನ ಇಂತಹ ಪುನರಾವರ್ತಿತ ಕರೆಗಳು ನಮ್ಮ ಸಂವಿಧಾನ ತಯಾರಕರು ಪ್ರತಿಪಾದಿಸಿರುವ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವದ ಪ್ರಶ್ನಾತೀತ ತತ್ವಗಳ ಮೇಲೆ ನೇರ ದಾಳಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

“ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವು ಸಂವಿಧಾನದ ಬಲವಾದ ಸ್ತಂಭಗಳಾಗಿದ್ದು, ಈ ತತ್ವಗಳಲ್ಲಿನ ಯಾವುದೇ ಬದಲಾವಣೆಯು ಬಾಬಾಸಾಹೇಬ್ ಡಾ ಅಂಬೇಡ್ಕರ್ ಮತ್ತು ನಮ್ಮ ಪೂಜ್ಯ ಸಂಸ್ಥಾಪಕರು ರೂಪಿಸಿದ ಭಾರತಕ್ಕೆ ಅವಮಾನವಾಗಿದೆ” ಎಂದು “ಸಂವಿಧಾನ್ ಬಚಾವೋ ಬಿಜೆಪಿ ಹಟಾವೋ” ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ, ಮತ್ತು ಮೋದಿ ಅವರ ನೆಚ್ಚಿನ ಅನಂತಕುಮಾರ್ ಹೆಗಡೆ ಈಗಾಗಲೇ ತಿಳಿದಿದ್ದನ್ನು ಮಾತ್ರ ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬುಡಮೇಲು ಮಾಡುವುದು ಬಿಜೆಪಿ ಮತ್ತು ಆರೆಸ್ಸೆಸ್ ಗುರಿಯಾಗಿದೆ ಎಂದಿದ್ದಾರೆ.

“400 ಸೀಟುಗಳನ್ನು ಮೀರುವ ಬಗ್ಗೆ ಪ್ರಧಾನ ಮಂತ್ರಿಗಳ ಎಲ್ಲಾ ಹೇಳಿಕೆಗಳು ಸಂವಿಧಾನವನ್ನು ಕಿತ್ತೊಗೆಯುವ ಗುರಿಯತ್ತ ಸಾಗುತ್ತಿವೆ. ಭಾರತದ ಜನರ, ವಿಶೇಷವಾಗಿ ದಲಿತರು, ಆದಿವಾಸಿಗಳು, ಒಬಿಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಕೊನೆಯ ರಕ್ಷಕ. ನಾವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಉಳಿಸಬೇಕಾದರೆ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಸಂರಕ್ಷಿಸಬೇಕಾದರೆ, ನಾವು ಮೋದಿ ಸರ್ಕಾರದ ವಿರುದ್ಧ ಮತ ಹಾಕಬೇಕು” ಎಂದು ಎಕ್ಸ್ ನಲ್ಲಿನ ಪೋಸ್ಟ್‌ ಮಾಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಇದು ಬಿಜೆಪಿ ಸಂವಿಧಾನ ವಿರೋಧಿ ಎಂಬುದನ್ನು ತೋರಿಸುತ್ತದೆ. ಅವರು ಸಂವಿಧಾನವನ್ನು ತಿದ್ದುಪಡಿ ಮಾಡಲಿ. ಬಿಜೆಪಿ ಸಂಸದರು ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ಅವರು ಅದಕ್ಕೆ ಪ್ರಧಾನಿಯಿಂದ ಮುದ್ರೆಯೊತ್ತಲಿ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next