ಮಂಗಳೂರು: ಐವನ್ ಡಿ’ ಸೋಜಾ ಅವರ ಮನೆಯಿಂದ ಜಿಲ್ಲಾ ಬಿಜೆಪಿ ಕಚೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದ್ದರಿಂದ ಶುಕ್ರವಾರ ಬೆಳಗ್ಗೆಯೇ ಪಿವಿಎಸ್ ಕಚೇರಿ ಬಳಿ ಬಿಜೆಪಿ ಶಾಸಕರು, ಪ್ರಮುಖರು, ಕಾರ್ಯಕರ್ತರು ಜಮಾಯಿಸಿದ್ದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ವಿಧಾನ ಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದ ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗಳಿಗೆಲ್ಲ ಭಾರತ್ ಮಾತಾ ಕಿ ಜೈ ಎನ್ನುವ ದೇಶಭಕ್ತ ಬಿಜೆಪಿ ಪಡೆ ಹೆದರುವುದಿಲ್ಲ. ಬಿಜೆಪಿ ಕಚೇರಿಗೆ ನುಗ್ಗುವುದೆಂದರೆ ಬಸ್ಸಿಗೆ ಕಲ್ಲು ಹೊಡೆದಷ್ಟು, ಸುಲಭವಲ್ಲ ಎಂದರು.
ಶಾಸಕ ಡಾ| ವೈ. ಭರತ್ ಶೆಟ್ಟಿ ಮಾತನಾಡಿ, ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿರುವ, ಪೊಲೀಸ್ ಇಲಾಖೆ ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್‌ನ ರಾಜಕಾರಣಿಗಳಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ. ಕಾಂಗ್ರೆಸ್‌ಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ ಕಾಂಗ್ರೆಸ್ಸಿಗರು, ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹಾಗೂ ವಿರೋಧವನ್ನು ಅರಿತು ಇತ್ತ ಸುಳಿಯದೇ ಪಲಾಯನ ಗೈದಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಹೇಶ್, ಯತೀಶ್ ಆರ್ವಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಮತ್ತಿತರರು ಉಪಸ್ಥಿತರಿದ್ದರು.