Advertisement

ಉದ್ಯಮಿಗಳ ಸಾಲ, ಮಹದಾಯಿ ಕುರಿತು ರಾಹುಲ್‌ಗೆ ಬಿಜೆಪಿ ಪ್ರಶ್ನೆ

06:20 AM Feb 27, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮ ಕ್ಷೇತ್ರದ ಎಷ್ಟು ಸಾಲ ಮನ್ನಾ ಮಾಡಿದೆ ಎಂಬುದಕ್ಕೆ ಲೆಕ್ಕ ಕೊಡುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

Advertisement

ಅಲ್ಲದೆ, ಮಹದಾಯಿ ವಿವಾದದ ಕುರಿತು ಕಾಂಗ್ರೆಸ್‌ ಪಕ್ಷದ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸುವುದರ ಜತೆಗೆ, ಈ ಹಿಂದೆ ಮಹದಾಯಿ ಕುರಿತು ಸೋನಿಯಾ ಗಾಂಧಿ ಅವರು ಗೋವಾ ನೆಲದಲ್ಲಿ ನಿಂತು ನೀಡಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ರಾಜ್ಯದಲ್ಲಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ ವೇಳೆ ಉದ್ಯಮ ಕ್ಷೇತ್ರದ ಸಾಲ ಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ ಕುರಿತಂತೆ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸುದ್ದಿಗೋಷ್ಠಿಯಲ್ಲಿ ಈ ಪ್ರಶ್ನೆ ಮುಂದಿಟ್ಟಿದ್ದಾರೆ.

ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮ ಕ್ಷೇತ್ರದ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದು ಹೇಳಿದ್ದೀರಿ. ಆದರೆ, ಈ ಆರೋಪವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಲ್ಲಗಳೆದಿದ್ದಾರೆ. ನಿಮ್ಮ ಆರೋಪ ನಿಜವೇ ಆಗಿದ್ದಲ್ಲಿ ಯಾವ್ಯಾವ ಉದ್ಯಮಕ್ಕೆ ಎಷ್ಟೆಷ್ಟು ಸಾಲ ಮನ್ನಾ ಮಾಡಿದ್ದಾರೆ ಎಂಬ ಲೆಕ್ಕ ಕೊಡಿ ಎಂದು ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಿದರು.

ಅದೇ ರೀತಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಉದ್ಯಮ ಕ್ಷೇತ್ರದ ಸುಮಾರು ಎಂಟು ಲಕ್ಷ ಕೋಟಿ ರೂ. ಎನ್‌ಪಿಎ (ವಸೂಲಾಗದ ಸಾಲ) ಇತ್ತು. ಇದನ್ನು ಆಗಿನ ಸರ್ಕಾರ ಯಾವ ರೀತಿ ಉದ್ಯಮಿಗಳ ಪರ ಪರಿವರ್ತನೆ ಮಾಡಿದೆ ಎಂಬುದನ್ನೂ ಹೇಳಬೇಕು. ಇಲ್ಲದಿದ್ದರೆ ನೀವು ಸುಳ್ಳು ಹೇಳುತ್ತಿದ್ದೀರಿ ಎಂಬುದು ಖಚಿತವಾಗುತ್ತದೆ ಎಂದು ಹೇಳಿದರು.

Advertisement

ಮಹದಾಯಿ- ನಿಲುವು ತಿಳಿಸಿ:
ರಾಹುಲ್‌ ಗಾಂಧಿ ಅವರು ರಾಜ್ಯದಲ್ಲಿ ಎರಡು ಸುತ್ತಿನ ಪ್ರವಾಸ ಮಾಡಿದರೂ ಮಹದಾಯಿ ವಿಚಾರದಲ್ಲಿ ಚಕಾರ ಎತ್ತಿಲ್ಲ. ಹಿಂದೆ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆ ವೇಳೆ ಮಹದಾಯಿ ನದಿಯಿಂದ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ನಿಲುವೇನು? ಸೋನಿಯಾ ಹೇಳಿಕೆಗೆ ಕ್ಷಮೆ ಯಾಚಿಸುತ್ತೀರಾ ಎಂದು ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ ಆರ್‌.ಅಶೋಕ್‌, ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.

ಕಾಂಗ್ರೆಸ್‌ಗೆ ಬುದ್ಧಿ ಹೇಳಲಿಲ್ಲ:
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಗೂಂಡಾ ನಡವಳಿಕೆ ಬಗ್ಗೆ ರಾಹುಲ್‌ ಗಾಂಧಿ ಅವರು ತಮ್ಮ ಎರಡು ಸುತ್ತಿನ ಪ್ರವಾಸದಲ್ಲೂ ಪ್ರಸ್ತಾಪಿಸಿಲ್ಲ ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಬುದ್ಧಿ ಹೇಳಿಲ್ಲ. ಕೇವಲ ಪ್ರಧಾನಿ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಕಾಲ ಕಳೆದಿದ್ದಾರೆ. ಈ ರೀತಿ ಉಡಾಫೆ ಮಾತನಾಡಿ ಜನರನ್ನು ತಪ್ಪುಗಾರಿಗೆ ಎಳೆಯುವುದನ್ನು ಬಿಡಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದ ಜನ ಬುದ್ಧಿ ಕಲಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next