Advertisement

ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

06:22 AM May 07, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಬಿಡುತ್ತಿಲ್ಲ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

Advertisement

ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಗೃಹ ಸಚಿವ ಎಂ.ಬಿ.ಪಾಟೀಲ್‌ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ವಿನಾಕಾರಣ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೆಂಗಳೂರು ಘಟಕದಿಂದ ಸೋಮವಾರ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ನಡೆಸಿದಾಗಲೆಲ್ಲಾ ತುರ್ತುಪರಿಸ್ಥಿಯ ಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸರ ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಆರೋಪಿಸಿದರು.

ಪ್ರಧಾನಮಂತ್ರಿಯವರನ್ನು ಗುಂಡಿಟ್ಟು ಕೊಲ್ಲಬೇಕು ಎಂದಿದ್ದ ಬೇಳೂರು ಗೋಪಾಲಕೃಷ್ಣ ವಿರುದ್ಧ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಆದರೆ, ಪತ್ರಕರ್ತರನ್ನು ಮಾತ್ರ ಬಂಧಿಸಿ ಜೈಲಿಗಟ್ಟುತ್ತಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಧ್ಯಮದವರ ಮೇಲೆ ನಮ್ಮ ಜೆಡಿಎಸ್‌ ಕಾರ್ಯಕರ್ತರು ಹಲ್ಲೆ ಮಾಡಿದರೆ ನಾವು ಹೊಣೆಯಲ್ಲ ಎಂದು ಹೇಳಿಕೆ ನೀಡಿದ ನಂತರ ದೌರ್ಜನ್ಯ ಹೆಚ್ಚಾಗಿದೆ ಎಂದು ಹೇಳಿದರು.

Advertisement

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರವೇ ಇಲ್ಲದಂತಾಗಿದೆ. ಮಹಿಳೆಯರನ್ನೂ ಸಹ ಪೊಲೀಸರು ಬಂಧಿಸಿ, ಗಂಟೆಗಟ್ಟಲೆ ಪೊಲೀಸ್‌ ಠಾಣೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದರು.

ಶಾಸಕ ಅಶ್ವತ್ಥನಾರಾಯಣ ಮಾತನಾಡಿ, ಹಿಂದೆ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಅವರಿಗೆ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಎಂ.ಬಿ.ಪಾಟೀಲರೂ ಗೃಹ ಇಲಾಖೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ನಗರಕ್ಕೆ ಉಗ್ರರು ನುಸುಳಿರುವ ಮಾಹಿತಿ ಇದೆ. ಮೊದಲು ಅವರ ಬಗ್ಗೆ ಗಮನಕೊಡುವುದು ಬಿಟ್ಟು, ಬಿಜೆಪಿ ಕಾರ್ಯಕರ್ತರ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ದೂರಿದರು.

ಇದೇ ಧೋರಣೆ ಮುಂದುವರಿದರೆ ಎಂ.ಬಿ.ಪಾಟೀಲ್‌ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನಾವು ಕಪ್ಪುಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಮೋಹನ್‌, ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಮುಖಂಡರಾದ ಶಿವರಾಮ್‌, ಚಿ.ನಾ.ರಾಮು, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್‌.ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next