ಬೆಂಗಳೂರು: ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ವತಿಯಿಂದ ಎರಡು ದಿನ ರಾಜ್ಯಾದ್ಯಂತ ಪ್ರತಿಭಟನೆ ನಡೆಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಳಕೆದಾರರಿಗೆ 200 ಯೂನಿಟ್‌ವರೆಗೆ ವಿದ್ಯುತ್ ಉಚಿತ ಎಂದಿದ್ದ ರಾಜ್ಯ ಸರಕಾರ, ಈಗ 80 ಯೂನಿಟ್‌ವರೆಗೆ ಎಂದು ಆದೇಶ ಹೊರಡಿಸಿ ಜನವಿರೋಧಿ ನೀತಿ ಪ್ರದರ್ಶಿಸಿದೆ. ಇದರ ಜತೆಗೆ ಸರಕಾರದ ಇತರ ಮೂರು ಜನವಿರೋಧಿ ನಿರ್ಧಾರಗಳನ್ನು ಹಿಂಪಡೆಯಲು ಆಗ್ರಹಿಸಿ ಸೋಮವಾರ ಮತ್ತು ಮಂಗಳವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಈ ಹಿಂದೆ ಮನೆಗಳಲ್ಲಿ ಪ್ರತಿ ತಿಂಗಳು 70 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ 80 ಯೂನಿಟ್ ಬಳಸಿ. ಆದರೆ ಯಾವುದೇ ಕಾರಣಕ್ಕೂ 80 ಯೂನಿಟ್ ಮೀರುವಂತಿಲ್ಲ ಎಂದು ಸರಕಾರ ಷರತ್ತು ವಿಧಿಸಿದೆ. ಇದು 200 ಯೂನಿಟ್ ವಿದ್ಯುತ್ ಉಚಿತ ಎಂಬ ಮಾತಿಗೆ ತಪ್ಪಿದಂತಲ್ಲವೇ ಎಂದು ಪ್ರಶ್ನಿಸಿದರು.
ವಿದ್ಯುತ್ ಶುಲ್ಕ ಹೆಚ್ಚಿಸಿ ಜನರಿಂದಲೇ ವಸೂಲಾತಿ
ವಿದ್ಯುತ್ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯೂನಿಟ್‌ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್‌ಗೆ 56 ರೂ. ಹೆಚ್ಚಿಸಿದಂತಾಗಿದೆ. ಹಾಗಿದ್ದರೆ ಸರಕಾರ ಮಾಡಿದ್ದೇನು? ಒಂದೆಡೆ ಉಚಿತ ಎನ್ನುವ ಸರಕಾರ ಮತ್ತೂಂದೆಡೆ ಶುಲ್ಕ ಹೆಚ್ಚಿಸುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್‌ಗೆ 5 ರೂಪಾಯಿಗೆ ಬಿಜೆಪಿ ಸರಕಾರ ಹೆಚ್ಚಿಸಿತ್ತು. ಅದನ್ನು ಈಗಿನ ಸರಕಾರ 1.5 ರೂ. ಕಡಿಮೆ ಮಾಡಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು ಎಂದು ಪ್ರಶ್ನಿಸಿದ ಅವರು, ಹಾಲಿಗೆ ಹಿಂದಿನಂತೆಯೇ ಪ್ರೋತ್ಸಾಹಧನ ನೀಡಬೇಕು ಎಂದರು.