ಕಲಬುರಗಿ: ಮುಸ್ಲಿಂರ ಮತಗಟ್ಟಿಗೊಳಿಸುವಿಕೆ ಹಿನ್ನೆಲೆಯಲ್ಲಿ ಸರ್ಕಾರ ವಕ್ಪ್ ಮೂಲಕ ರೈತರಿಗೆ ನೊಟೀಸ್ ನೀಡಲಾಗುತ್ತಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ರೈತರ ಜಮೀನು ಪಡೆಯಲು ಬಿಡುವುದಿಲ್ಲ ಎಂಬ ಘೋಷಣೆಗಳೊಂದಿಗೆ ಭಾರತೀಯ ಜನತಾ ಪಕ್ಷ ಸೋಮವಾರ (ನ.04) ನಗರದಲ್ಲಿ ಪ್ರತಿಭಟನೆ ನಡೆಸಿತು.
ಕಲಬುರಗಿ ಜಿಲ್ಲೆ ಸೇರಿ ರಾಜ್ಯಾದ್ಯಂತ ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳು, ಗುಡಿಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆದಿದ್ದು, ಇದನ್ನು ಯಾವುದೇ ಕಾರಣಕ್ಕೂ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಜಿಲ್ಲೆಯ ಚಿಂಚೋಳಿ, ಸೇಡಂ, ಆಳಂದ, ಕಲಬುರಗಿ, ಕಮಲಾಪುರ, ಶಹಾಬಾದ್, ಚಿತ್ತಾಪುರ, ಅಫಜಲಪುರ ಸೇರಿ ಜಿಲ್ಲಾದ್ಯಂತ ರೈತರ ಜಮೀನುಗಳಲ್ಲಿ ವಿನಾಕಾರಣ ವಕ್ಫ್ ಹೆಸರು ಉಲ್ಲೇಖಿಸಲಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ರೈತರ ಜಮೀನು ಹೊಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ತಲೆ ತಲಾಂತರದಿಂದ ಬಂದ ಆಸ್ತಿಗಳನ್ನು ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಕೆಗಾಗಿ ಕಬಳಿಸುವ ಹುನ್ನಾರ ನಡೆಸುತ್ತಿದೆ. ಕೂಡಲೇ ಸ್ಥಗಿತಗೊಳಿಸಬೇಕು. ಪ್ರಮುಖವಾಗಿ ಸಚಿವ ಜಮೀರ್ ಅಹ್ಮದ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ರೈತರು ಯಾವುದೇ ಕಾರಣಕ್ಕೂ ಹೆದರಬಾರದು. ಭಾರತೀಯ ಜನತಾ ಪಕ್ಷದ ಕಚೇರಿ ಯಾವತ್ತಿಗೂ ತೆರೆದಿರುತ್ತದೆ. ಪಕ್ಷದ ತಂಡ ಈ ನಿಟ್ಟಿನಲ್ಲಿ ಸಕ್ರೀಯವಾಗಿ ಕೆಲಸ ಮಾಡಲಿದ್ದು, ಕಾನೂನು ಸಹಕಾರ ನೀಡಲಾಗುವುದು. ಸಿಎಂ ಅವರು ನೊಟೀಸ್ ನೀಡಬಾರದು ಎಂದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಜಮೀನು ಕಬಳಿಸುವ ಹುನ್ನಾರ ನಡೆಯುವ ಸಾಧ್ಯತೆಗಳಿಗೆ. ಹೀಗಾಗಿ ನಿರಂತರ ಹೋರಾಟ ಹಾಗೂ ಜಾಗೃತಿ ಅಗತ್ಯವಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕರು, ಮಾಜಿ ಶಾಸಕರು ಹಾಗೂ ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವೂ ವಕ್ಫ್ ಬಿಲ್ ಜಾರಿಗೆ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ತರಾತುರಿಯಲ್ಲಿ ಕೈಗೆ ಸಿಕ್ಕಿದ ಆಸ್ತಿಗಳನೆಲ್ಲ ತನ್ನದು ಎಂದು ಹೇಳಿಕೊಂಡು, ಇಂಡೀಕರಣ, ದಾಖಲೀಕರಣ ಮಾಡುತ್ತಿದೆ. ರಾಜ್ಯ ಸರ್ಕಾರ ರೈತರಿಗೆ ಅನ್ಯಾಯವಾಗುವಂತಹ ನಡೆಯನ್ನು ಮುಂದಿನ ದಿನಗಳಲ್ಲೂ ತೋರಬಾರದು ಎಂದು ಆಗ್ರಹಿಸಿದರು.
ಶಾಸಕ ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಮಾಜಿ ಶಾಸಕ ಅಮರನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕಲಬುರಗಿ ಮಹಾನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.