Advertisement

ಪ್ರಿಯಾಂಕ್ ಕ್ಷೇತ್ರದ ಪುರಸಭೆಯಲ್ಲಿ ಭ್ರಷ್ಟಾಚಾರ: ಬಿಜೆಪಿ ಪ್ರತಿಭಟನೆ

06:00 PM Sep 28, 2022 | Team Udayavani |

ವಾಡಿ (ಚಿತ್ತಾಪುರ): ಪಟ್ಟಣದ ಪುರಸಭೆಯ ಕಾಂಗ್ರೆಸ್ ಆಡಳಿತದ ಐದು ವರ್ಷದ ಅವಧಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಪುರಸಭೆ ಕಚೇರಿ ಮುಂದೆ ಟೆಂಟ್ ಹೊಡೆದು ಪ್ರತಿಭಟನಾ ಧರಣಿ ಆರಂಭಿಸುವ ಮೂಲಕ ಕಾಂಗ್ರೆಸ್ ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಬೋಗಸ್ ಬಿಲ್‌ಗಳ ಸಂಪೂರ್ಣ ತನಿಖೆ ಕೈಗೊಂಡು ತಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಮತ್ತು ಇದಕ್ಕೆ ಸಹಕರಿಸಿದ ಕಾಂಗ್ರೆಸ್ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಶಿವರಾಮ ಪವಾರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಾಣುತ್ತಿಲ್ಲ. ವಾಡಿ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹಳ ವರ್ಷಗಳಿಂದ ವರ್ಗಾವಣೆಯಾಗದೆ ಇಲ್ಲಿಯೇ ಗೂಟ ಹೊಡೆದುಕೊಂಡು ಕುಳಿತಿದ್ದು, ಭ್ರಷ್ಟಾಚಾರವೇ ಬದುಕಿನ ಧ್ಯೇಯವಾಗಿಸಿಕೊಂಡಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದಂತೆ ಆಡಳಿತ ನಡೆಯುತ್ತಿದೆ. ಪರಿಣಾಮ ಸಾಮಾನ್ಯ ಜನರ ವೈಯಕ್ತಿಕ ಸರ್ಕಾರಿ ಕೆಲಸ ಕಾರ್ಯಗಗಳು ಲಂಚ ಕೊಡದೆ ಆಗುತ್ತಿಲ್ಲ. ಬಸವೇಶ್ವರ ಚೌಕ್‌ನಲ್ಲಿದ್ದ ಹೈಮಾಸ್ಟ್ ದೀಪದ ಕಂಬವನ್ನು ಮಾರಿಕೊಂಡು ತಿಂದಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಠಿಸಿ ಕೋಟ್ಯಾಂತರ ರೂಪಾಯಿ ಅನುದಾನ ಲೂಟಿ ಮಾಡಿದ್ದಾರೆ ಆರೋಪಿಸಿದರು.

ಇದನ್ನೂ ಓದಿ: ಕೇರಳ ಸಚಿವನಿಗೆ ನಿಷೇಧಿತ ಸಂಘಟನೆಯೊಂದಿಗೆ ಲಿಂಕ್ : ಬಿಜೆಪಿ ಆರೋಪ

Advertisement

ಪುರಸಭೆ ವಿರೋಧ ಪಕ್ಷದ ನಾಯಕ, ಬಿಜೆಪಿ ಹಿರಿಯ ಮುಖಂಡ ಭೀಮಶಾ ಜಿರೊಳ್ಳಿ ಮಾತನಾಡಿ, ಪುರಸಭೆಯಲ್ಲಿ ಅಧ್ಯಕ್ಷರಿಗಾಗಿ ಪ್ರತ್ಯೇಕ ಕೊಠಡಿ ಇದ್ದರೂ ಕಡತಗಳನ್ನು ಅಧ್ಯಕ್ಷರ ಮನೆಗೆ ಕಳುಹಿಸಿ ಸಹಿ ಪಡೆಯುತ್ತಿರುವ ಮುಖ್ಯಾಧಿಕಾರಿ ವಿಠ್ಠಲ್ ಹಾದಿಮನಿ ಗುಲಾಮಗಿರಿ ಮಾಡುತ್ತಿದ್ದಾರೆ. ಬಸವೇಶ್ವರ ಚೌಕ್ ಹೈಮಾಸ್ಟ್ ದೀಪ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕಿಲ್ಲದೆ ರಾತ್ರೋರಾತ್ರಿ ಕಣ್ಮರೆ ಮಾಡಿದ್ದಾರೆ. ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದೆ. ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. 5 ಕೋಟಿ ರೂ. ಅನುದಾನದ ಮುಖ್ಯರಸ್ತೆ ಕಾಮಗಾರಿ ಸಂರ್ಪೂಣ ಕಳಪೆಯಾಗಿದೆ. ಅದು ಜನರಿಗಾಗಿ ಮಾಡುತ್ತಿರುವ ರಸ್ತೆಯಲ್ಲ. ಕಾಂಗ್ರೆಸ್ ಕಾರ್ಯಕರ್ತರ ಹೊಟ್ಟೆ ತುಂಬಿಸಲು ಮಾಡುತ್ತಿರುವ ರಸ್ತೆಯಾಗಿದೆ. ಪುರಸಭೆ ಎಂಬುದು ಕಾಂಗ್ರೆಸ್ ಕಚೇರಿಯಂತಾಗಿದೆ. ಪುರಸಭೆಯಲ್ಲಿ ವಿರೋಧ ಪಕ್ಷ ಇದೆ ಎಂಬ ಅರಿವು ಕೂಡ ಇವರಿಗಿಲ್ಲ. ಮನಬಂದಂತೆ ಬೇಕಾಬಿಟ್ಟಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳ ಮೇಲೆ ರಸ್ತೆ ನಿರ್ಮಿಸಿ ಅನುದಾನ ಲಪಟಾಯಿಸಿದ್ದಾರೆ. ಪುರಸಭೆ ಅಧ್ಯಕ್ಷೆ, ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರ ವಿರುದ್ಧ ಕ್ರಮಕೈಗೊಳ್ಳಬೇಕು. ಕಳಪೆ ಕಾಮಗಾರಿ ಮತ್ತು ಬೋಗಸ್ ಬಿಲ್ ದಾಖಲಿಸುವಲ್ಲಿ ನಿಪುಣನಾಗಿರುವ ಜಹೇರ್ ಖಾನ್ ಎಂಬ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಭ್ರಷ್ಟಾಚಾರಿಗಳನ್ನು ಜೈಲಿಗೆ ಹಾಕುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.

ಬಿಜೆಪಿ ತಾಲೂಕು ಮುಖಂಡರಾದ ವಿಠ್ಠಲ್ ವಾಲ್ಮೀಕಿ ನಾಯಕ, ರಾಮದಾಸ ಜಾಧವ, ರಾಜು ಮುಕ್ಕಣ್ಣ, ವೀರಣ್ಣ ಯಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ಪುರಸಭೆ ಸದಸ್ಯರಾದ ಅನಿತಾ ರಾಮು ರಾಠೋಡ, ರವಿ ನಾಯಕ, ರಾಜೇಶ ಅಗರವಾಲ, ಭೀಮರಾಯ ಸುಬೇದಾರ, ಕಿಶನ ಜಾಧವ, ಮುಖಂಡರಾದ ಭೀಮರಾವ ದೊರೆ, ಮಹ್ಮದ್ ರಶೀದ್, ಶರಣಗೌಡ ಚಾಮನೂರ, ಹರಿ ಗಲಾಂಡೆ, ಬಸವರಾಜ ಕೀರಣಗಿ, ಶ್ರೀಕಾಂತ ಚವ್ಹಾಣ, ಆನಂದ ಇಂಗಳಗಿ, ರವಿ ಕಾರಬಾರಿ, ಬಸವರಾಜ ಮಡ್ಡಿ, ಅಂಬಾದಾಸ ಜಾಧವ, ಪ್ರಕಾಶ ಪೂಜಾರಿ, ಯಂಕಮ್ಮ ಗೌಡಗಾಂವ, ಅನ್ನಪೂರ್ಣ ದೊಡ್ಡಮನಿ, ರಾಜು ಕೋಲಿ, ಜಗತಸಿಂಗ್ ರಾಠೋಡ, ಶಿವಶಂಕರ ಕಾಶೆಟ್ಟಿ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕಾಗಮಿಸಿದ ತಹಶಿಲ್ದಾರ ಉಮಾಕಾಂತ ಹಳ್ಳೆ ಮನವಿ ಪತ್ರ ಸ್ವೀಕರಿಸಿದರು. ಪುರಸಭೆ ಆಡಳಿತದ ಭ್ರಷ್ಟಾಚಾರದ ತನಿಖೆ ಈಗಾಗಲೇ ಶುರುವಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒಂದು ವಿಶೇಷ ತನಿಖಾ ತಂಡ ರಚನೆಯಾಗಿದ್ದು, ಆದಷ್ಟು ಬೇಗ ಸತ್ಯಾಸತ್ಯತೆ ಹೊರಬೀಳಲಿದೆ. ಅಲ್ಲದೆ ಜೆಇ ಅಶೋಕ ಪುಟಪಾಕ್ ಅವರನ್ನು ವಾಡಿ ಪುರಸಭೆಯಿಂದ ವರ್ಗಾವಣೆ ಮಾಡಲಾಗಿದೆ ಎಂದರು.

“ಮುಖ್ಯ ಬಸ್ ನಿಲ್ದಾಣ ಇಲ್ಲದ ವಾಡಿ ಪಟ್ಟಣಕ್ಕೆ ಶಹಾಬಾದ-ವಾಡಿ ನಗರ ಯೋಜನೆ ಪ್ರಾಧೀಕಾರ ವತಿಯಿಂದ ಐದು ಮಿನಿ ಬಸ್ ನಿಲ್ದಾಣಗಳು ಮಂಜೂರಾಗಿವೆ. ಅವುಗಳ ಕಾರ್ಯಕ್ಕೆ ಪುರಸಭೆಯ ಕಾಂಗ್ರೆಸ್ ಸದಸ್ಯರಾದ ಮಹ್ಮದ್ ಗೌಸ್ ಮತ್ತು ಮಲ್ಲಯ್ಯ ಗುತ್ತಿಗೆದಾರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ನಗರದ ಅಭಿವೃದ್ಧಿ ಬೇಕಾಗಿಲ್ಲ. ಈಗಲು ಸಹಮತ ನೀಡಿದರೆ ಮಿನಿ ಬಸ್ ನಿಲ್ದಾಣಗಳು ನಿರ್ಮಾಣವಾಗಲಿವೆ”– ರಾಜು ಮುಕ್ಕಣ್ಣ,ಸದಸ್ಯರು, ನಗರ ಯೋಜನೆ ಪ್ರಾಧಿಕಾರ ಶಹಾಬಾದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next