ಹೊಸದಿಲ್ಲಿ: “ಲೋಕಸಭೆ ಒಳಗೆ ಅವಾಚ್ಯ ಪದಗಳ ಬಳಕೆ ಮೂಲಕ ತನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಬಿಜೆಪಿ, ಇದೀಗ ಸಂಸತ್ತಿನ ಹೊರಗೆ ತನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸಾಮೂಹಿಕ ದಾಳಿ ನಡೆಸಲು ಸಜ್ಜುಗೊಂಡಿದೆ’ ಎಂದು ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಆರೋಪಿಸಿದ್ದಾರೆ.
ಬಿಜೆಪಿ ಸಂಸದ ರಮೇಶ್ ಬಧೂರಿ ಹೇಳಿಕೆ ವಿವಾದದ ಬೆನ್ನಲ್ಲೇ, ಬಿಜೆಪಿಯ ಮತ್ತೂಬ್ಬ ಸಂಸದರಾದ ನಿಶಿಕಾಂತ್ ದುಬೆ ಅವರು ಡ್ಯಾನಿಷ್ ಅಲಿಯನ್ನು ಗುರಿಯಾಗಿಸಿ, ಪ್ರಧಾನಿ ಅವರನ್ನೇ ಅಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಸಭಾದ್ಯಕ್ಷರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಲಿ, “ದುಬೆ ಅವರ ಪತ್ರವನ್ನು ನೋಡಿದೆ ! ಇದು ಸಂಪೂರ್ಣ ಆಧಾರರಹಿತ. ಗೌರವಾನ್ವಿತ ಸ್ಪೀಕರ್ ಅವರು ಈ ಆರೋಪದ ಬಗ್ಗೆ ತನಿಖೆ ಮಾಡಬೇಕು ಎಂದು ನಾನು ಮನವಿ ಮಾಡತ್ತೇನೆ.
ಈ ಆಧಾರರಹಿತ ಆರೋಪದ ಮೂಲಕ ದುಬೆ ನನ್ನ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ’ ಎಂದು ಹೇಳಿದ್ದಾರೆ. ಇತ್ತ ಮಹಾರಾಷ್ಟ್ರದ ಶಿವಸೇನೆಯ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಕೂಡ ಡ್ಯಾನಿಷ್ ಅವರ ವಿರುದ್ಧ ಬಧೂರಿ ಬಳಸಿರುವ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೂಂದೆಡೆ ಈ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಲು ಬಧೂರಿ ನಿರಾಕರಿಸಿದ್ದು,” ವಿಷಯವನ್ನು ಸ್ಪೀಕರ್ ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಇಷ್ಟವಿಲ್ಲ’ ಎಂದಿದ್ದಾರೆ.