Advertisement

ಬಿಜೆಪಿ ಪರಿವರ್ತನಾ ರಥಯಾತ್ರೆ ಮಾರ್ಗ ಸಿದ್ಧ

06:35 AM Oct 12, 2017 | Team Udayavani |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಳ್ಳಲಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಮಾರ್ಗ ಮತ್ತು ವೇಳಾಪಟ್ಟಿ ಅಂತಿಮಗೊಂಡಿದೆ. ನ. 2ರಂದು ಆರಂಭವಾಗುವ ಈ ಯಾತ್ರೆಗೆ 2018ರ ಜ. 25ರಂದು ಅಂತಿಮಗೊಳ್ಳಲಿದ್ದು, ಜ. 28ರಂದು ಅಧಿಕೃತ ತೆರೆ ಬೀಳಲಿದೆ.

Advertisement

ರಥಯಾತ್ರೆ ಅಂಗವಾಗಿ ನ. 2ರ ಉದ್ಘಾಟನೆ ದಿನ ಹಳೇ ಮೈಸೂರು ಮತ್ತು ಕರಾವಳಿ, ಮಲೆನಾಡು ಭಾಗದಿಂದ ಪ್ರತಿ ಬೂತ್‌ನಿಂದ ತಲಾ ಮೂರು ಬೈಕ್‌ಗಳಲ್ಲಿ ಒಟ್ಟು ಆರು ಮಂದಿ ಬೆಂಗಳೂರಿಗೆ ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಿದ್ದಾರೆ. ಅದೇ ರೀತಿ ಡಿ. 17ರಂದು ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಇದಕ್ಕೆ ಉತ್ತರ ಕರ್ನಾಟಕ ಭಾಗದಿಂದ ಬೈಕ್‌ ರ್ಯಾಲಿ ಆಗಮಿಸಲಿದೆ.

ಯಾತ್ರೆಯ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭಾಗವಹಿಸುವುದು ಖಚಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವುದು ಇನ್ನೂ ಅಂತಿಮವಾಗಿಲ್ಲ. ಶುಕ್ರವಾರ (ಅ.13) ನಡೆಯಲಿರುವ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಯಾತ್ರೆಯ ವೇಳಾಪಟ್ಟಿ ಮತ್ತು ಮಾರ್ಗ ನಕ್ಷೆ ಕುರಿತು ಚರ್ಚಿಸಿ ಅಂತಿಮ ಮುದ್ರೆ ಒತ್ತಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾರ್ಗ ಹೇಗೆ ಸಾಗುತ್ತದೆ?:
ನ. 2ರಂದು ಬೆಂಗಳೂರು ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ರಥಯಾತ್ರೆಯನ್ನು ಉದ್ಘಾಟಿಸಲಾಗುತ್ತದೆ. ಅಲ್ಲಿಂದ ಕುಣಿಗಲ್‌ ಮೂಲಕ ತುಮಕೂರು ಜಿಲ್ಲೆಗೆ ತೆರಳಲಿರುವ ಯಾತ್ರೆ, ಹಾಸನ, ಮಡಿಕೇರಿ ಮಾರ್ಗವಾಗಿ ದಕ್ಷಿಣ ಕನ್ನಡ ಸೇರುತ್ತದೆ. ನಂತರ ಉಡುಪಿ, ಉತ್ತರ ಕನ್ನಡ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮಾರ್ಗವಾಗಿ ಡಿ. 14ರಂದು ಧಾರವಾಡ ತಲುಪಲಿದೆ. 15ರಂದು ಆ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಹುಬ್ಬಳ್ಳಿಯಲ್ಲಿ ತಂಗಲಿದೆ.

ಡಿ. 16ರಂದು ಯಾತ್ರೆಗೆ ವಿಶ್ರಾಂತಿ ಇರುತ್ತದೆ. ಡಿ. 17ರಂದು ಹುಬ್ಬಳ್ಳಿಯಲ್ಲಿ ಬೈಕ್‌ ರ್ಯಾಲಿ ಮತ್ತು ಬೃಹತ್‌ ಸಮಾವೇಶ ನಡೆಯಲಿದ್ದು, ಅಲ್ಲಿಂದ ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ ಮಾರ್ಗವಾಗಿ ತುಮಕೂರಿನ ಕೆಲ ತಾಲೂಕುಗಳ ಮೂಲಕ ಚಿಕ್ಕಬಳ್ಳಾಪುರಕ್ಕೆ ತಲುಪಲಿದೆ. ಬಳಿಕ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸಂಚರಿಸಿ ಮೈಸೂರು ಸೇರಲಿದೆ. ಮೈಸೂರಿನಲ್ಲಿ 2018ರ ಜ. 25ರಂದು ಬೃಹತ್‌ ರ್ಯಾಲಿಯೊಂದಿಗೆ ರಥಯಾತ್ರೆ ಅಂತಿಮಗೊಳ್ಳಲಿದೆ. ಈ ರ್ಯಾಲಿಯನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಸಾಧ್ಯತೆ ಇದೆ.

Advertisement

ರಥಯಾತ್ರೆ ಜ. 25ರಂದು ಮೈಸೂರಿನಲ್ಲಿ ಅಂತ್ಯಗೊಳ್ಳುತ್ತದೆಯಾದರೂ ಅದರ ಅಧಿಕೃತ ಸಮಾರೋಪ ಜ. 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದರ ಅಂಗವಾಗಿ ಅಂದು ಬೃಹತ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

ವಿಶ್ರಾಂತಿ: ಒಟ್ಟು 85 ದಿನ ನಡೆಯುವ ಯಾತ್ರೆಯಲ್ಲಿ 10 ದಿನ ವಿಶ್ರಾಂತಿ ಇರಲಿದೆ. ಈ ಪೈಕಿ ವರ್ಷಾಂತ್ಯ ಮತ್ತು ಹೊಸ ವರ್ಷದ ಮೊದಲ ದಿನವೂ (ಡಿ. 31 ಮತ್ತು ಜ.1) ಇದೆ. ಜತೆಗೆ ಸಂತ ಸಮ್ಮೇಳನದ ಅಂಗವಾಗಿ ನ. 24 ರಿಂದ 25ರವರೆಗೆ (3 ದಿನ), ಡಿ. 25ರಂದು ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದಂದು, 2018ರ ಜ. 14ರಂದು ಮಕರ ಸಂಕ್ರಮಣ ಹಾಗೂ ಜ. 18ರಂದು ಉಡುಪಿ ಪರ್ಯಾಯ ಅಂಗವಾಗಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ.

ಬೆಂಗಳೂರು ಸಮಾವೇಶದ ಜವಾಬ್ದಾರಿ ಅಶೋಕ್‌ಗೆ
ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಸಂಚಾಲಕರಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಈಗಾಗಲೇ ನೇಮಿಸಲಾಗಿದ್ದು, ಇದರ ಜತೆಗೆ ನ. 2ರಂದು ಬೆಂಗಳೂರಿನಲ್ಲಿ ನಡೆಯುವ ಯಾತ್ರೆಯ ಉದ್ಘಾಟನಾ ಸಮಾವೇಶ ಮತ್ತು ರ್ಯಾಲಿಯ ಜವಾಬ್ದಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರಿಗೆ ವಹಿಸಲಾಗಿದೆ.ಒಟ್ಟಾರೆ ಯಾತ್ರೆಯನ್ನು ಸಾಂಪ್ರದಾಯಿಕ ಪ್ರಚಾರ ಸಮಿತಿಯ ಸಂಚಾಲಕಿಯೂ ಆಗಿರುವ ಶೋಭಾ ಕರಂದ್ಲಾಜೆ ಅವರೇ ನೋಡಿಕೊಳ್ಳಲಿದ್ದಾರೆ. ಜತೆಗೆ ಆಯಾ ವಿಭಾಗದ ಪ್ರಧಾನ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲಾಧ್ಯಕ್ಷರೊಂದಿಗೆ ಸೇರಿ ಯಾತ್ರೆಗೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲಿದ್ದಾರೆ.

ಯಾತ್ರೆಯ ಸಂಚಾಲಕರಾಗಿ ಶೋಭಾ ಕರಂದ್ಲಾಜೆ ಅವರಿಗೆ ಸಂಪೂರ್ಣ ಜವಾಬ್ದಾರಿ ವಹಿಸಿದ ಬಗ್ಗೆ ಸ್ವಲ್ಪ ಮಟ್ಟಿನ ಅಸಮಾಧಾನ ಹೊಗೆಯಾಡಿತ್ತು. ಹೀಗಾಗಿ ಯಾತ್ರೆಗೆ ಸಂಬಂಧಿಸಿದ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next