ದೊಡ್ಡಬಳ್ಳಾಪುರ: ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡರ ಮನೆ ಮೇಲೆ ನಡೆದ ಕಲ್ಲು ತೂರಾಟ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ನಡೆಸಿದ ಹಲ್ಲೆ ಘಟನೆ ಖಂಡಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಸಮಿತಿ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಯ್ಯ, ಸಮ್ಮಿಶ್ರ ಸರ್ಕಾರ ಅತಂತ್ರವಾಗಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗೂಂಡಾ ಸಂಸ್ಕೃತಿ: ಸರ್ಕಾರದ ನಿಲುವುಗಳಿಂದ ಬೇಸತ್ತಿರುವ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೆ ಆಡಿಯೋ ಟೇಪ್ ಹಗರಣವನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಇದರಿಂದ ರಾಜ್ಯದ ಜನತೆಗೆ ವಿರೋಧ ಪಕ್ಷದ ಬಗ್ಗೆ ಅನುಮಾನ ಬರುವ ರೀತಿ ಕಥೆ ಕಟ್ಟುತ್ತಿದ್ದಾರೆ. ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡರ ಮನೆ ಹಾಗೂ ಕಾರ್ಯಕರ್ತರ ಮೇಲೆ ದಾಳಿ ನಡೆಸುವಂತಹ ಗೂಂಡಾ ಸಂಸ್ಕೃತಿಯನ್ನು ಹಾಸನದ ಜೆಡಿಎಸ್ ಮುಖಂಡರು ಪ್ರಾರಂಭಿಸಿದ್ದಾರೆಂದು ದೂರಿದರು.
ಕಾನೂನು, ಸುವ್ಯವಸ್ಥೆ ಕುಸಿತ: ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಜೋ.ನಾ.ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಶಾಸಕ ಪ್ರೀತಂ ಗೌಡರ ಮನೆ ಮೇಲೆ ನಡೆದ ಕಲ್ಲು ತೂರಾಟ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಗಳೇ ಸಾಕ್ಷಿಯಾಗಿವೆ ಎಂದು ಆರೋಪಿಸಿದರು.
ಹಾಸನದಲ್ಲಿ ನೆಲೆ ಕಳೆದುಕೊಳ್ಳುವ ಆತಂಕದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ. ಶಾಂತಿಪ್ರಿಯ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿಸಲು ಹೊರಟಿದ್ದು, ಇಂತಹ ದಾಳಿಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೀಳು ರಾಜಕಾರಣ: ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಎಚ್.ರಂಗರಾಜು ಮಾತನಾಡಿ, ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ವಿಫಲವಾಗಿದೆ. ಅಕಾರಿಗಳ ವರ್ಗಾವಣೆ ದಂದೆಯನ್ನು ನಡೆಸುವುದನ್ನೆ ಕಾಯಕವಾಗಿಸಿಕೊಂಡಿದೆ. ರಾಜ್ಯದ 176 ತಾಲ್ಲೂಕುಗಳಲ್ಲಿ ಬರದಿಂದ ಜನತೆ ಬಸವಳಿಯುತ್ತಿದ್ದರೂ ಮುಖ್ಯಮಂತ್ರಿ ಬರ ವೀಕ್ಷಣೆ ನಡೆಸಿಲ್ಲ.
ತಮ್ಮ ಕುರ್ಚಿ ಉಳಿಸಿಕೊಳ್ಳುವ ದಾವಂತದಲ್ಲಿ ರಾಜ್ಯದ ಅಭಿವೃದ್ಧಿ ಕಡೆಗಣಿಸುವ ಜೊತೆಗೆ ವಿರೋಧ ಪಕ್ಷಗಳ ಮೇಲೆ ಸುಳ್ಳು ಆರೋಪ, ಪ್ರಶ್ನಿಸುವ ಶಾಸಕರ ಮನೆ ಹಾಗೂ ಬೆಂಬಲಿಗರ ಮೇಲೆ ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಆರ್.ಗೋವಿಂದರಾಜ್, ಮುಖಂಡರಾದ ಬಿ.ಜಿ.ಶ್ರೀನಿವಾಸ್, ರಾಮ್ ಕಿ ಟ್ಟಿ, ಕಾಂತರಾಜ್, ಮುನಿರಾಜ್, ಕೆ.ಮೋಹನ್ ಕುಮಾರ್, ಉಮಾಮಹೇಶ್ವರಿ, ದ್ರಾûಾಯಿಣಿ, ಕಮಲ, ಅಮರ ನಾಥ್ ಮುಂತಾದವರು ಭಾಗವಹಿಸಿದ್ದರು.