ಬೆಂಗಳೂರು: ಮಹದೇವಪುರ ವಲಯದ ಮಿಟಗಾನಹಳ್ಳಿ ಹಾಗೂ ಬೆಳ್ಳಳ್ಳಿ ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, “ಮಿಟಗಾನಹಳ್ಳಿ ಮತ್ತು ಬೆಳ್ಳಳ್ಳಿ ಕ್ವಾರಿಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುತ್ತಿರುವುದರಿಂದ ಅಂತರ್ಜಲ ಕಲುಷಿತಗೊಂಡಿದೆ.
ಸುತ್ತಮುತ್ತಲ ಹಳ್ಳಿಗಳ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ತ್ಯಾಜ್ಯದ ದುರ್ವಾಸನೆಯಿಂದಾಗಿ ಸುತ್ತಲ ಪ್ರದೇಶದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಬಿಬಿಎಂಪಿ ಅಕಾರಿಗಳು ಪೊಲೀಸರ ಭದ್ರತೆಯ ನಡುವೆ ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಕಸ ಸುರಿಯುವುದನ್ನು ಕೂಡಲೇ ಸ್ಥಗಿತಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಸಿದರು.
“ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಂತೆ ಮಹದೇವಪುರ ವ್ಯಾಪ್ತಿಯ ರಾಂಪುರ ಕೆರೆಯಲ್ಲಿಯೂ ಇತ್ತೀಚೆಗೆ ನೊರೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನೂರಾರು ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆಗಳು ಗುಂಡಿ ಬಿದ್ದಿವೆ. ಮಂಡೂರಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ ವೇಳೆ ತ್ಯಾಜ್ಯ ಘಟಕಕ್ಕೆ ಮುಂದಿನ ದಿನಗಳಲ್ಲಿ ತ್ಯಾಜ್ಯ ಹಾಕುವುದಿಲ್ಲ ಮತ್ತು ಘಟಕದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಭೂಭರ್ತಿ ಮಾಡಿ, ಉದ್ಯಾನ ನಿರ್ಮಿಸುವುದಾಗಿ ತಿಳಿಸಿದ್ದರು.
ಆದರೆ ಈವರೆಗೆ ಅಂಥ ಯಾವುದೇ ಕೆಲಸವಾಗಿಲ್ಲ. ಪ್ರತಿಬಾರಿ ಮಳೆ ಬಂದಾಗ ತ್ಯಾಜ್ಯದಿಂದ ದುರ್ವಾಸನೆ, ತ್ಯಾಜ್ಯದಿಂದ ಉತ್ಪತ್ತಿಯಾಗುತ್ತಿರುವ ಕ್ರಿಮಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರೊಂದಿಗೆ ಕನ್ನಮಂಗಲ, ಸೀಗೆಹಳ್ಳಿ ಸೇರಿದಂತೆ ತ್ಯಾಜ್ಯ ಘಟಕಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವ ಪ್ರಕರಣಗಳು ಹೆಚ್ಚುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, “”ನಗರದ ಕೆರೆ ಹಾಗೂ ಪರಿಸರ ರಕ್ಷಣೆಗೆ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ. ನಗರದ ತ್ಯಾಜ್ಯ ಸಮಪರ್ಕವಾಗಿ ವಿಲೇವಾರಿ ಮಾಡಲು 912 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಟೆಂಡರ್ ಕರೆಯದೆ ನೇರ ಗುತ್ತಿಗೆದಾರಿಗೆ ವಿಲೇವಾರಿಗುತ್ತಿಗೆ ನೀಡಲಾಗುತ್ತಿದೆ. ಪಾಲಿಕೆ ಆಡಳಿತ ತ್ಯಾಜ್ಯದಲ್ಲಿ ಕೋಟ್ಯಂತರ ಹಣ ಲೂಟಿ ಮಾಡುತ್ತಿದೆ,” ಎಂದು ಆರೋಪಿಸಿದರು.
ನಾಗರಿಕರು ಮನೆಯಲ್ಲೇ ಕಸ ವಿಂಗಡಿಸಿದರೆ ಸಮಸ್ಯೆ ಇಲ್ಲ
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತಿಯೊಬ್ಬರೂ ಮನೆ ಅಥವಾ ವಾರ್ಡ್‌ಗಳಲ್ಲಿ ಸಂಸ್ಕರಿಸಲು ಮುಂದಾಗಬೇಕು. ಇದರಿಂದ ನಗರದಲ್ಲಿ ತ್ಯಾಜ್ಯ ಸಮಸ್ಯೆ ತಲೆದೋರುವುದಿಲ್ಲ. ಜತೆಗೆ ನಗರದ ಹೊರವಲಯಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ನಮ್ಮ ವಿರೋಧವಿದೆ. ಅದಕ್ಕಾಗಿ ಪ್ರತಿ ವಾರ್ಡ್‌ನಲ್ಲಿ ಕಾಂಪೋಸ್ಟ್ ಸಂತೆಗಳನ್ನು ನಡೆಸಿ ನಾಗರಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಕಣ್ಣೂರು ರಸ್ತೆಯ ಅಭಿವೃದ್ಗಾಗಿ ಪಾಲಿಕೆಯಿಂದ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು ಪೂರೈಕೆ, ದುರ್ವಾಸನೆ ನಿಯಂತ್ರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ 5 ಕೋಟಿ ರೂ. ಮೀಸಲಿಡಲಾಗಿದೆ. ಮಂಡೂರಿನಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಸಮಸ್ಯೆ ಪರಿಹರಿಸಲಾಗುವುದು ಮತ್ತು ರಾಂಪುರ ಕೆರೆ ಅಭಿವೃದ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.