ಸಾಗರ: ಪ್ರತಿಷ್ಟಿತ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಗೆ ತುಪ್ಪ ಸುರಿದು ಕಾಂಗ್ರೆಸ್ ಪಕ್ಷ ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರುವುದನ್ನು ಬ್ರಾಹ್ಮಣ ಸಮುದಾಯ ಖಂಡಿಸುತ್ತದೆ ಎಂದು ಬಿಜೆಪಿ ನಗರ ಅಧ್ಯಕ್ಷ ಹಾಗೂ ಬ್ರಾಹ್ಮಣ ಮುಖಂಡ ಕೆ.ಆರ್.ಗಣೇಶ್ ಪ್ರಸಾದ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತು ಸಂಘರ್ಷವನ್ನು ಹುಟ್ಟುಹಾಕುವ ಮೂಲಕ ಆರೋಗ್ಯಕರ ಸಮಾಜವನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ್ದಾರೆ.
ಎಲ್‌ಬಿ ಕಾಲೇಜಿನ ಘಟನೆ ಯಾವುದೇ ಒಂದು ಸಮುದಾಯ, ಜಾತಿಗೆ ಸೀಮಿತವಾದುದ್ದಲ್ಲ. ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ ತಮ್ಮ ಕುಟುಂಬದವರನ್ನೆ ಹೆಚ್ಚು ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಸಂಸ್ಥೆಯನ್ನು ತಮ್ಮ ಕುಟುಂಬದ ಆಸ್ತಿಯಾಗಿ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು. ಸಂಸ್ಥೆ ಅಧ್ಯಕ್ಷರಾದ ಶ್ರೀನಿವಾಸ್ ಕೆ.ಎಚ್. ಮತ್ತಿತರರ ಮನವಿ ಮೇರೆಗೆ ಶಾಸಕರು ಸರ್ವಸದಸ್ಯರ ಸಭೆಗೆ ಹಾಜರಾಗಿದ್ದಾರೆ. ಸಭೆಗೆ ಹಾಜರಾಗಿದ್ದ ಶಾಸಕರಿಗೆ ಕೆಲವರು ಅವಮಾನ ಮಾಡಿದ್ದಾರೆ. ಘಟನೆಯಲ್ಲಿ ಶ್ರೀಪಾದ ಹೆಗಡೆ ನಿಸ್ರಾಣಿ, ಜಗದೀಶ್ ಗೌಡ ಸೇರಿದಂತೆ ಮತ್ತಿಕೊಪ್ಪ ವೆಂಕಟಗಿರಿ, ಮಂಜುನಾಥ್ ಇನ್ನಿತರರ ಮೇಲೆ ಸಹ ಹಲ್ಲೆ ನಡೆದಿದೆ ಎಂದರು.
ಹರನಾಥ್‌ರಾವ್ ಮತ್ತು ಶ್ರೀನಿವಾಸ್ ಅವರಿಗೆ ವಾಚಾಮಗೋಚರವಾಗಿ ಬೈಯಲಾಗಿದೆ. ಆದರೆ ರವೀಶ್ ಮತ್ತಿತರ ಬ್ರಾಹ್ಮಣ ಮುಖಂಡರು ಕೇವಲ ಶ್ರೀಪಾದ ಹೆಗಡೆ ನಿಸ್ರಾಣಿ, ಜಗದೀಶ ಗೌಡರ ಮೇಲಿನ ಹಲ್ಲೆ ಮಾತ್ರ ಖಂಡಿಸಿದ್ದು ನಿಜಕ್ಕೂ ಬೇಸರದ ಸಂಗತಿ. ಎಲ್ಲರೂ ಒಟ್ಟಾಗಿ ಕಾಲೇಜಿನ ಅಭಿವೃದ್ಧಿ ಮಾಡಬೇಕು. ಈ ವಿಷಯದಲ್ಲಿ ಶಾಸಕರು ಸರ್ವಸದಸ್ಯರ ಸಭೆಗೆ ಹಾಜರಾಗಿದ್ದಾರೆ. ಘಟನೆ ಹಿಂದೆ ಬೇರೆಬೇರೆ ಶಕ್ತಿಗಳ ಕೈವಾಡವಿದೆ. ಘಟನೆ ನಡೆದ ನಂತರ ಕಾಂಗ್ರೆಸ್ ಪ್ರವೇಶ ಮಾಡಿ ಜಾತಿ ವಿಷಬೀಜ ಬಿತ್ತುವ ಪ್ರಯತ್ನ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪುರಸಭೆ ಮಾಜಿ ಅಧ್ಯಕ್ಷೆ ಶರಾವತಿ ಸಿ.ರಾವ್ ಮಾತನಾಡಿ, ಎಂಡಿಎಫ್ ಯಾವುದೇ ಪಕ್ಷದ್ದಲ್ಲ. ಅದೊಂದು ಶೈಕ್ಷಣಿಕ ಸಂಸ್ಥೆ. ಆದರೆ ಶ್ರೀಪಾದ ಹೆಗಡೆ ನಿಸ್ರಾಣಿ ತಮ್ಮ ಕುಟುಂಬದ ಆಸ್ತಿಯನ್ನಾಗಿ ಸಂಸ್ಥೆಯನ್ನು ತೆಗೆದುಕೊಳ್ಳಲು ಪ್ರಯತ್ನ ನಡೆಸಿದ್ದೇ ಗಲಾಟೆಗೆ ಕಾರಣವಾಗಿದೆ. ಶ್ರೀಪಾದ ಹೆಗಡೆ ಪ್ರತಿಯೊಬ್ಬ ಸದಸ್ಯರ ಮನೆಗೆ ಹೋಗಿ ಶ್ರೀನಿವಾಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಡಿ. ಅವರನ್ನು ಒದ್ದು ಹೊರಗೆ ಹಾಕುತ್ತೇನೆ. ಎಳೆದು ಸಂಸ್ಥೆಯಿಂದ ಹೊರಗೆ ಹಾಕುತ್ತೇನೆ ಎಂದು ಹೇಳಿದ್ದಾರೆ. ಸಂಸ್ಥೆಯನ್ನು ಕಟ್ಟಿಬೆಳೆಸಿದ ಶ್ರೀನಿವಾಸ್ ಅವರಿಗೆ ಮಾಡಿರುವ ಅವಮಾನ ಖಂಡನೀಯ. ಸಂಸ್ಥೆಯ ಬೆಳವಣಿಗೆಗೆ ಅನೇಕರ ಶ್ರಮವಿದೆ. ಆದರೆ ಈಚೆಗೆ ಬಂದ ಶ್ರೀಪಾದ ಹೆಗಡೆ ಇಡೀ ಸಂಸ್ಥೆಯನ್ನೇ ತಮ್ಮ ಕುಟುಂಬದ ಆಸ್ತಿಯಾಗಿ ಮಾಡಿಕೊಳ್ಳಲು ಮುಂದಾಗಿದ್ದು ಅವರ ಅಧಿಕಾರದಾಹಕ್ಕೆ ಸಾಕ್ಷಿಯಾಗಿದೆ ಎಂದರು.
ಸಭೆಗಿಂತ ಮೊದಲು ತಮ್ಮ ಕಡೆಯ 50ಕ್ಕೂ ಹೆಚ್ಚು ಜನರನ್ನು ಸೇರಿಸಿ ಗೂಂಡಾಗಿರಿಗೆ ವೇದಿಕೆ ಸಜ್ಜು ಮಾಡಿದ್ದು ಶ್ರೀಪಾದ ಹೆಗಡೆ. ಈಗ ಶಾಸಕರು ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಂಬಿಸಿ, ಅವರಿಗೆ ಕೆಟ್ಟಹೆಸರು ತರುವ ಪ್ರಯತ್ನ ನಡೆಸಲಾಗುತ್ತಿದೆ. ಹಾಲಪ್ಪ ಅವರು ಶಾಸಕರಾಗಿ ನಾಲ್ಕು ವರ್ಷವಾಯಿತು. ಈತನಕ ಬ್ರಾಹ್ಮಣ ಸಮುದಾಯದ ಒಬ್ಬರನ್ನೂ ಅವರು ತುಚ್ಛವಾಗಿ ಕಂಡಿಲ್ಲ. ಕೆಲವರು ಬ್ರಾಹ್ಮಣರ ನಡುವೆ ಬಿರುಕು ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಶಾಸಕರು ಬ್ರಾಹ್ಮಣ ಸಮುದಾಯದ ಹಿತಕಾಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಶ್ರೀನಿವಾಸ್ ಮೇಲೆ ಹಲ್ಲೆ ಮಾಡುತ್ತಾರೆ ಎನ್ನುವ ಮಾಹಿತಿ ತಿಳಿದು ಶಾಸಕರು ಸಭೆಗೆ ಹಾಜರಾಗಿ ಹಿರಿಯರ ಮೇಲೆ ಹಲ್ಲೆ ನಡೆಯುವುದನ್ನು ತಪ್ಪಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಬ್ರಾಹ್ಮಣ ಸಮಾಜದ ಮುಖಂಡರಾದ ಗಿರೀಶ್ ಹಕ್ರೆ, ವಿನಾಯಕರಾವ್ ಮನೆಘಟ್ಟ ಮಾತನಾಡಿದರು. ಗೋಷ್ಠಿಯಲ್ಲಿ ಗುರುದತ್ತ, ರಮೇಶ್ ಎಚ್.ಎಸ್., ರಾಜೇಶ್ ಮಾವಿನಸರ, ರಾಧಾಕೃಷ್ಣ ಮತ್ತಿಕೊಪ್ಪ, ರಾಮಸ್ವಾಮಿ, ರಾಜೇಶ್ ಅಲಗೋಡು, ಮಹಾಬಲೇಶ್ವರ್ ಇನ್ನಿತರರು ಹಾಜರಿದ್ದರು.