Advertisement
ಮೈತ್ರಿ ಸರ್ಕಾರ ವಿರುದ್ಧವಾಗಿ ಬಂಡಾಯ ಎದ್ದಿದ್ದ 17 ಶಾಸಕರಲ್ಲಿ ಬಹುತೇಕರಿಗೆ ಬಿಜೆಪಿ ಸೇರುವ ಹಂಬಲ ಇದೆ ಮತ್ತು ಅದನ್ನು ಆಪ್ತರ ಬಳಿಯಲ್ಲೂ ಹೇಳಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಒಂದೆರೆಡು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. ಆದರೆ, ಕ್ಷೇತ್ರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ.
Related Articles
Advertisement
ಅನರ್ಹ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿಯ ರಾಜ್ಯ ಮುಖಂಡರು ಯಾರೂ ಕೂಡ ಅಧಿಕೃತವಾದ ಆಹ್ವಾನ ನೀಡಿಲ್ಲ ಹಾಗೂ ಅತೃಪ್ತ ಶಾಸಕರು ಕೂಡ ಎಲ್ಲಿಯೂ ಬಿಜೆಪಿಗೆ ಸೇರಿಕೊಳ್ಳುತ್ತೇವೆ ಎಂಬುದನ್ನು ಸಾರ್ವಜನಿಕವಾಗಿ ಹೇಳಿಲ್ಲ. ಬಿಜೆಪಿಯ ಕೆಲವು ಮುಖಂಡರಿಗೆ ಅತೃಪ್ತ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಇರಾದೆಯಿದೆ. ಅದರೆ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವಂತಿಲ್ಲ.
ಬಿಜೆಪಿ ಈಗ ಅಧಿಕಾರದಲ್ಲಿ ಇರುವುದರಿಂದ ಸರ್ಕಾರಕ್ಕೆ ನೇರ ಹೊಡೆತ ಬೀಳುವ ಎಚ್ಚರಿಕೆಯೂ ಇರುವುದರಿಂದ ಯಾವುದನ್ನು ಎಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಕೆಲವು ಮುಖಂಡರು ಇದ್ದಾರೆ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ.
ಅನರ್ಹಗೊಂಡಿರುವ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜತೆಗೆ ತಮ್ಮ ಬೆಂಬಲಿಗರಿಗೆ ಮುಂದಿನ ನಡೆ ಏನು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ ಜತೆಗೆ ಹೋಗುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾರ್ಯಕರ್ತರ ನಡುವೆ ಸಾಕಷ್ಟು ವಾಗ್ವಾದ ಆಗಿದ್ದರಿಂದ ಈಗ ಏಕಾಏಕಿ ಒಪ್ಪಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಕೂಡ ಹಿಂದೇಟು ಹಾಕುತ್ತಿದ್ದಾರೆ. ಹಾಗೆಯೆ ಅತೃಪ್ತ ಶಾಸಕರ ಬೆಂಬಲಿಗರು ಕೂಡ ಬಿಜೆಪಿ ಕಾರ್ಯಕರ್ತರೊಂದಿಗೆ ಸಂಘಟನಾತ್ಮಕವಾಗಿ ಬೆರೆಯಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.
ಶಾಸಕರ ವಿರುದ್ಧವೇ ಪ್ರಕರಣವನ್ನು ದಾಖಲಿಸಿ, ಕೋರ್ಟು, ಕಚೇರಿಗೂ ಅಲೆದಾಡಿದ್ದಾರೆ. ಇಷ್ಟೆಲ್ಲಾ ಇರುವಾಗ ಏಕಾಏಕಿ ಅವರು ನಮ್ಮ ಪಕ್ಷಕ್ಕೆ ಬಂದರೆ ಹೇಗೆ ತತ್ವ ಸಿದ್ಧಾಂತ ಬಿಟ್ಟು ಅವರನ್ನು ಒಪ್ಪಿಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಪ್ರಶ್ನಿಸುತ್ತಾರೆ.
ಜಿ.ಟಿ.ದೇವೇಗೌಡರಿಗೆ ಬಿಜೆಪಿಯಿಂದ ಗಾಳ?ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ನಂತರ ಜೆಡಿಎಸ್‌ನ ಮೈಸೂರು ಭಾಗದ ಮತ್ತೂಬ್ಬ ಪ್ರಭಾವಿ ಮುಖಂಡ ಜಿ.ಟಿ.ದೇವೇಗೌಡರ ಸೆಳೆಯಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ನೆಲೆ ಕಲ್ಪಿಸಲು ಬಿ.ಎಸ್.ಯಡಿಯೂರಪ್ಪ ರೂಪಿಸಿರುವ ಕಾರ್ಯತಂತ್ರವಿದು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಎಚ್.ವಿಶ್ವನಾಥ್, ಜಿ.ಟಿ.ದೇವೇಗೌಡ, ವಿ.ಶ್ರೀನಿವಾಸಪ್ರಸಾದ್ ಅವರ ಬೆಂಬಲ ಇದ್ದರೆ ಮೈಸೂರು-ಚಾಮರಾಜನಗರ -ಮಂಡ್ಯ ಭಾಗದ ಕ್ಷೇತ್ರವೊಂದರಿಂದ ಪುತ್ರ ವಿಜಯೇಂದ್ರ ಅವರನ್ನು ವಿಧಾನಸಭೆ ಚುನಾವಣೆಗೆ ನಿಲ್ಲಿಸಿ ಆಯ್ಕೆ ಮಾಡುವುದು, ಆ ಭಾಗದ ನಾಯಕತ್ವ ವಹಿಸುವುದು ಯಡಿಯೂರಪ್ಪ ಅವರ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ 12 ಹಾಗೂ ಜೆಡಿಎಸ್‌ನ ಇನ್ನೂ ಐವರು ಶಾಸಕರು ಬಿಜೆಪಿಗೆ ಬರಲು ಸಿದ್ಧವಾಗಿದ್ದಾರೆ. ಆದರೆ, ಬಿಜೆಪಿ ನಾಯಕರೇ ತಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ● ರಾಜು ಖಾರ್ವಿ ಕೊಡೇರಿ