Advertisement

BJP, ಎನ್‌ಡಿಎ ಗೆಲುವು ತಪ್ಪಿಸಲಾಗದು: ವಿಜಯೇಂದ್ರ

12:19 AM May 28, 2024 | Team Udayavani |

ಉಡುಪಿ: ಕರಾವಳಿ ಪಕ್ಷ ಸಂಘಟನೆಯ ನೆಲೆ. ಬಿಜೆಪಿ ಹಾಗೂ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಇಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ವಾಗಿ ಪ್ರಚಾರ ಬಿರುಸುಗೊಂಡಿದ್ದು ಬಿಜೆಪಿ, ಎನ್‌ಡಿಎ ಅಭ್ಯರ್ಥಿಗಳು ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಜಿಲ್ಲಾ ಬಿಜೆಪಿ ವತಿಯಿಂದ ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕಿದಿಯೂರು ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ ಘಟ ನಾಯಕರ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವರು ಪಕ್ಷ ಸೂಚಿಸಿದ ಅಭ್ಯರ್ಥಿ ಯನ್ನು ಬೆಂಬಲಿಸದೇ ಪಕ್ಷೇತರರಾಗಿ ನಿಂತು ಗೆದ್ದು ಬಿಜೆಪಿಗೆ ಸೇರುತ್ತೇವೆ ಎನ್ನುತ್ತಿದ್ದಾರೆ. ಇಂತಹ ಮಾತಿಗೆ ಯಾರೂ ಮನ್ನಣೆ ನೀಡಬಾರದು ಎಂದರು.

ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಡಾ| ಧನಂಜಯ ಸರ್ಜಿ ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌. ಭೋಜೇಗೌಡ ಅವರನ್ನು ಗೆಲ್ಲಿಸಬೇಕು ಎಂದರು.

ಅಭ್ಯರ್ಥಿ ಧನಂಜಯ ಸರ್ಜಿ ಮಾತನಾಡಿ, ಪದವೀಧರರ ಹಲವು ಸಮಸ್ಯೆಗಳನ್ನು ಖುದ್ದು ಅರಿತಿದ್ದೇನೆ. ಸರಕಾರದ ನಡುವೆ ಕೊಂಡಿಯಾಗಿ ಪದವೀಧರರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿದ್ದೇನೆ ಎಂದರು.

ಎನ್‌ಡಿಎ ಅಭ್ಯರ್ಥಿ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಕಾಂಗ್ರೆಸ್‌ ಸರಕಾರ ಶಿಕ್ಷಕರ ನೋವು, ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗಬೇಕು ಎಂದರು.

Advertisement

ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ ಗಂಟಿಹೊಳೆ, ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಪ್ರಮುಖರಾದ ಕುಯಿಲಾಡಿ ಸುರೇಶ್‌ ನಾಯಕ್‌, ಪ್ರಮೋದ್‌ ಮಧ್ವರಾಜ್‌, ಉದಯ ಕುಮಾರ್‌ ಶೆಟ್ಟಿ, ಲಾಲಾಜಿ ಮೆಂಡನ್‌ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ನಿರೂಪಿಸಿ, ಉಪಾಧ್ಯಕ್ಷ ಕಿರಣ್‌ ಕುಮಾರ್‌ ವಂದಿಸಿದರು.

ರಘುಪತಿ ಭಟ್ಟರಿಗೆ ಅನ್ಯಾಯವಾಗಿಲ್ಲ: ಬಿ.ವೈ.ವಿ.
ಮಾಜಿ ಶಾಸಕ ಕೆ. ರಘುಪತಿ ಭಟ್ಟರಿಗೆ ಬಿಜೆಪಿಯಿಂದ ಯಾವುದೇ ಅನ್ಯಾಯವಾಗಿಲ್ಲ. ಪಕ್ಷ ಅವರನ್ನು 3 ಬಾರಿ ಶಾಸಕರನ್ನಾಗಿ ಮಾಡಿದೆ. ಕೊಟ್ಟ ಅವಕಾಶ ಬಳಸಿಕೊಂಡು ಬೆಳೆದಿದ್ದಾರೆ, ಎಡವಿದ್ದಾರೆ. ಪ್ರತಿ ಸಲವೂ ಅವರಿಗೆ ಅವಕಾಶ ನೀಡಲು ಪಕ್ಷದ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಅವರು ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ನಡು ರಸ್ತೆಯಲ್ಲಿ ನಮಾಜ್‌, ಪೊಲೀಸ್‌ ಠಾಣೆಗೆ ಕಲ್ಲು ಹೊಡೆಯುವುದು, ಗ್ಯಾಂಗ್‌ವಾರ್‌ ಹೀಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದ ಸಿಬಂದಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವರೊಬ್ಬರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ತತ್‌ಕ್ಷಣವೇ ಸಚಿವ ನಾಗೇಂದ್ರ ಅವರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next