Advertisement

ಚುನಾವಣೆ: ಸಿದ್ಧಾಂತಗಳ ಸಮರ

12:30 AM Jan 12, 2019 | Team Udayavani |

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯು ತತ್ವ ಹಾಗೂ ಸಿದ್ಧಾಂತಗಳ ನಡುವಿನ ಹೋರಾಟ. ಬಿಜೆಪಿ ಬಡವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಪ್ರತಿಪಕ್ಷಗಳು ಕೇವಲ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಮಹಾಮೈತ್ರಿಗೆ ಮುಂದಾಗಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಶುಕ್ರವಾರ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯನ್ನು ಮೂರನೇ ಪಾಣಿಪತ್‌ ಯುದ್ಧಕ್ಕೆ ಹೋಲಿಸಿದ್ದಾರೆ. 2019ರ ಚುನಾವಣೆಯು ಮರಾಠರು ಮತ್ತು ಆಫ‌^ನ್‌ ಸೇನೆ ನಡುವೆ ನಡೆದ ಮೂರನೇ ಪಾಣಿಪತ್‌ ಯುದ್ಧದಂತೆ, ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂದು ಹೇಳಿದ್ದಾರೆ. 

ಕಾರ್ಯಕಾರಿಣಿಯ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ವಸ್ತುಶಃ ಆರಂಭಿಸಿದ ಶಾ, ಬಿಜೆಪಿಯು ವಿಶ್ವದ ಅತ್ಯಂತ ಜನಪ್ರಿಯ ನಾಯಕನನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿಯೇ ಪ್ರತಿಪಕ್ಷಗಳು ಮೈತ್ರಿಗಾಗಿ ಶೋಧಕ್ಕೆ ಮುಂದಾಗಿವೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಮತ್ತು ಇತರರು ಎಂಬ ಸ್ಥಿತಿ ಇತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರು ಎಂದು ಬದಲಾಗಿದೆಎಂದು ಲೇವಡಿ ಮಾಡಿದ್ದಾರೆ. 

ಇದೇ ವೇಳೆ, ಮಹಾಘಟಬಂಧನ್‌ ವಿರುದ್ಧ ಹರಿಹಾಯ್ದ ಶಾ, ಪ್ರತಿಪಕ್ಷಗಳು ಕೇವಲ ಅಧಿಕಾರಕ್ಕಾಗಿ ಮೈತ್ರಿಗೆ ಮುಂದಾಗಿವೆ ಮತ್ತು ಅದಕ್ಕಾಗಿ ಮಿತ್ರರನ್ನು ಹುಡುಕುತ್ತಿವೆ. ಆ ಒಕ್ಕೂಟಕ್ಕೆ ಯಾವುದೇ ನಾಯಕನೂ ಇಲ್ಲ, ನೀತಿ-ನಿರ್ಧಾರಗಳೂ ಇಲ್ಲÉ. ದೇಶ ವ್ಯಾಪಿಯಾಗಿ ಪ್ರಭಾವವನ್ನೂ ಹೊಂದಿಲ್ಲ ಎಂದು ಕಟಕಿಯಾಡಿದ್ದಾರೆ. 

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಬಗ್ಗೆ ಲೇವಡಿ ಮಾಡಿದ ಶಾ, ಮಹಾ ಮೈತ್ರಿಕೂಟ ಎಂಬುದೇ ಸುಳ್ಳು. 2014ರಲ್ಲಿ ಉತ್ತರ ಪ್ರದೇಶದಲ್ಲಿ ನಾವು 80 ಸ್ಥಾನಗಳ ಪೈಕಿ 72ನ್ನು ಗೆದ್ದಿದ್ದೆವು. ಈ ಬಾರಿ ಇನ್ನೂ 2 ಸ್ಥಾನ ಹೆಚ್ಚು ಗೆಲ್ಲುವ ಮೂಲಕ ಒಟ್ಟು ಮೊತ್ತವನ್ನು 74ಕ್ಕೆ ವೃದ್ಧಿಸಿಕೊಳ್ಳಲಿದ್ದೇವೆ ಎಂದಿದ್ದಾರೆ. 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ ದೇಶವನ್ನು ನಿರ್ಲಕ್ಷಿಸಿತ್ತು ಎಂದಿರುವ ಅಮಿತ್‌ ಶಾ, ಈ ಬಾರಿಯ ಚುನಾವಣೆಯಲ್ಲಿಯೂ ಲೋಕಸಭೆಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Advertisement

ಒಂದೇ ವಾರದಲ್ಲಿ 2 ನಿರ್ಧಾರ:
ಕೇಂದ್ರ ಸರ್ಕಾರವು ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳಿಗೆ ಜಿಎಸ್‌ಟಿ ವಿನಾಯಿತಿ ಪ್ರಮಾಣವನ್ನು ಪರಿಷ್ಕರಿಸಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲು ನೀಡಿದೆ. ಇದೊಂದು ದಶಕಗಳ ಬೇಡಿಕೆಯಾಗಿತ್ತು. ಅದನ್ನು ಈಡೇರಿಸುವ ಮೂಲಕ ಕೋಟ್ಯಂತರ ಯುವ ಜನತೆಯ ಆಶೋತ್ತರಗಳನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಈ ಎರಡೂ ಪ್ರಮುಖ ನಿರ್ಧಾರಗಳನ್ನು ಒಂದೇ ವಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಶಾ ಕೊಂಡಾಡಿದ್ದಾರೆ. 

ರಾಮ ಮಂದಿರಕ್ಕೆ ಬದ್ಧ:
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಅಡ್ಡಿಯಾಗಿದೆ. ಸುಪ್ರೀಂಕೋರ್ಟಲ್ಲಿ ಸದ್ಯ ಪ್ರಕರಣವಿದೆ. ಅದು ಇತ್ಯರ್ಥವಾದ ಕೂಡಲೇ ಮಂದಿರವನ್ನು ಅಯೋಧ್ಯೆಯಲ್ಲಿಯೇ ನಿರ್ಮಿಸುತ್ತೇವೆ ಎಂದು ಘೋಷಿಸಿದ್ದಾರೆ ಶಾ. ಉತ್ತರ ಪ್ರದೇಶದಲ್ಲಿ ಶನಿವಾರ ಬಿಎಸ್‌ಪಿ-ಎಸ್ಪಿ ಮೈತ್ರಿಯ ವಿವರಗಳನ್ನು ಪ್ರಕಟಿಸಲಿರುವಂತೆಯೇ, ಬಿಜೆಪಿ ಅಧ್ಯಕ್ಷರ ಈ ಹೇಳಿಕೆ ಮಹತ್ವ ಪಡೆದಿದೆ.

ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ:
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ಶಾ, ಭ್ರಷ್ಟಾಚಾರ ಪ್ರಕರಣದಲ್ಲಿ ತಾಯಿ ಮತ್ತು ಮಗ ಜಾಮೀನಿನಲ್ಲಿ ಹೊರಗಿದ್ದರೂ, ಪ್ರಧಾನಿ ಮೋದಿ ವಿರುದ್ಧ ರಫೇಲ್‌ ಡೀಲ್‌ನಲ್ಲಿ ಭ್ರಷ್ಟಾಚಾರವೆಸಗಿದ ಆರೋಪ ಹೊರಿಸುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‌ ಅಧಿಕಾರ ವಂಚಿತವಾಗಿರುವುದು ರಾಹುಲ್‌ಗೆ ಜಿಗುಪ್ಸೆ ಉಂಟುಮಾಡಿದೆ. ಹೀಗಾಗಿ, ಹೋದಲ್ಲೆಲ್ಲ ರಫೇಲ್‌ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರು. 

2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ನೇತೃತ್ವದ ಸರ್ಕಾರದ ಒಂದೊಂದು ಸಾಧನೆಗಳನ್ನೂ ಶಾ ವಿವರಿಸಿದ್ದಾರೆ. 2022ರ ಒಳಗಾಗಿ ದೇಶದ ಪ್ರತಿಯೊಬ್ಬರಿಗೂ ಮನೆ, ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ಸಮಾನ ಹುದ್ದೆೆ; ಸಮಾನ ಪಿಂಚಣಿ ವಿಚಾರವನ್ನು ಬಗೆಹರಿಸಲಾಯಿತು ಎಂದಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ಅರುಣ್‌ ಜೇಟಿÉ, ಸುಷ್ಮಾ ಸ್ವರಾಜ್‌ ಸೇರಿದಂತೆ ದೇಶಾದ್ಯಂತದಿಂದ ಆಗಮಿಸಿದ 12 ಸಾವಿರಕ್ಕೂ ಅಧಿಕ ಮಂದಿ ನಾಯಕರು, ಕಾರ್ಯಕರ್ತರು, ಮುಖ್ಯಮಂತ್ರಿಗಳು 2 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಹೊಸ ಘೋಷ ವಾಕ್ಯ
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌ಎಂಬ ಘೋಷ ವಾಕ್ಯ ಬಿಡುಗಡೆ ಮಾಡಿತ್ತು. ಅದನ್ನೇ ಪರಿಷ್ಕರಿಸಿ ಅಬ್‌ಕಿ ಬಾರ್‌ ಫಿರ್‌ ಮೋದಿ ಸರ್ಕಾರ್‌ಎಂದು ಉದ್ಘೋಷವನ್ನು ಮರು ವಿನ್ಯಾಸಗೊಳಿಸಲಾಗಿದೆ. ದಲಿತರು, ಹಿಂದುಳಿದ ವರ್ಗದವರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಪರ್ಕಿಸಿ ಪಕ್ಷದ ಬಲವರ್ಧನೆ ಮತ್ತು ಹೆಚ್ಚಿನ ಸ್ಥಾನ ಗಳಿಸುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next