Advertisement

Vijayapura: ಕೇಂದ್ರದ ಅನ್ಯಾಯದ ಬಗ್ಗೆ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು: ಎಂ.ಬಿ.ಪಾಟೀಲ

03:35 PM Feb 17, 2024 | Team Udayavani |

ವಿಜಯಪುರ: ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗೆ ಇಲ್ಲ. ಆದರೆ ರಾಜ್ಯದ ಬಜೆಟ್ ಮಂಡನೆ ಆರಂಭಗೊಳ್ಳುತ್ತಲೇ ವಿಪಕ್ಷ ಬಿಜೆಪಿ ಸದಸ್ಯರು ಸದನದ ಹೊರಗೆ ಹೋಗಿ ಏನಿಲ್ಲ, ಇಲ್ಲ, ಇಲ್ಲ ಎಂದು ಹಾಡತೊಡಗಿದ್ದಾರೆ. ಬದಲಾಗಿ ವಿಧಾನಸಭೆ ಒಳಗೇ ಹಾಡಬೇಕಿತ್ತು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ‌.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ 14ನೇ ಕಮೀಷನ್ ಗಿಂತ 15ನೇ ಕಮೀಷನ್ ನಲ್ಲಿ 62 ಸಾವಿರ ಕೋಟಿ ರೂ. ಕಡಿಮೆ ಬಂದಿದೆ. ಇದರ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಬಾರಿ ಮಂಡಿಸಿರುವ ಬಜೆಟ್ ಅಭಿವೃದ್ಧಿ ಹಾಗೂ ಸಾಮಾಜಿಕ ಸಮನ್ವಯದ ಬಜೆಟ್ ಆಗಿದೆ. ಕೇಂದ್ರ ಸರ್ಕಾರದ ಅನ್ಯಾಯದ ಮಧ್ಯೆಯೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಎಲ್ಲಾ ಇಲಾಖೆಗಳಿಗೆ ಅನುದಾನ ನೀಡಿರುವ ಅತ್ಯುತ್ತಮ ಬಜೆಟ್ ನೀಡಿದ್ದಾರೆ ಎಂದು ಬಣ್ಣಸಿದರು.

ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ದೆಹಲಿಗೆ ಹೋಗಿ ಪ್ರತಿಭಟಿಸಿ ಬಂದಿದ್ದೇವೆ.  ಅಲ್ಲದೇ ಇದೀಗ ಬಜೆಟ್ ಮೂಲಕ ಶ್ವೇತಪತ್ರ ಪ್ರಕಟಿಸಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಅಧಿಕಾರದಲ್ಲಿದ್ದಾಗ 606 ಭರವಸೆ ನೀಡಿ 50 ಭರವಸೆಗಳನ್ನೂ ಈಡೇರಿಸಲಾಗದ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಬಜೆಟ್ ಟೀಕಿಸುತ್ತಿದ್ದಾರೆ. 2013 ರಲ್ಲಿ ಸಿದ್ದರಾಮಯ್ಯ ಅವರು 165 ಭರವಸೆ ನೀಡಿ 158 ಭರವಸೆ ಈಡೇರಿಸಿದ್ದಲ್ಲದೇ 30 ಯೋಜನೆಗಳನ್ನು ಜಾರಿಗೆ ತಂದಿದ್ದರು. ಇದೀಗ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಇತರೆ ಕಾರ್ಯಕ್ರಮಗಳನ್ನೂ ಪ್ರಕಟಿಸಿದ್ದಾರೆ ಎಂದು ಕುಟುಕಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ 1.5 ಲಕ್ಷ ಕೋಟಿ ಹಣ ನೀಡುವುದಾಗಿ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದ ಯಡಿಯೂರಪ್ಪ, ರಕ್ತದಲ್ಲಿ ಬರೆದುಕೊಡುವ ಮಾತನಾಡಿದ್ದರು. ಆದರೇ ಏನೂ ಕೊಡಲಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

Advertisement

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ನ್ಯಾಯ ಕಲ್ಪಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ, ಪುನರ್ನಿರ್ಮಾಣದ ಕುರಿತು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಯಲಿದೆ. ಐದು ವರ್ಷಗಳಲ್ಲಿ ಹಂತ ಹಂತವಾಗಿ ಯೋಜನೆ ಮಾಡುತ್ತೇವೆ ಎಂದರು.

ಇದೆಲ್ಲಕ್ಕೂ ಮುನ್ನ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ. ಅಧಿಸೂಚನೆ ಹೊರಡಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು‌.

Advertisement

Udayavani is now on Telegram. Click here to join our channel and stay updated with the latest news.

Next