Advertisement

ಸಂಸತ್‌ ಸದಸ್ಯರ ವಿದೇಶ ಪ್ರವಾಸ ಬಹಿರಂಗ ಕಡ್ಡಾಯಗೊಳಿಸಿ

10:13 AM Dec 08, 2019 | Sriram |

ನವದೆಹಲಿ: ಸಂಸತ್‌ ಸದಸ್ಯರು ಕೈಗೊಳ್ಳುವ ವಿದೇಶ ಪ್ರವಾಸದ ವಿವರಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ತರಬೇಕು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಜಿ.ವಿ.ಎಲ್‌.ನರಸಿಂಹ ರಾವ್‌ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರು ಮೇಲ್ಮನೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ್ದಾರೆ.

Advertisement

ಯಾವುದೇ ರೀತಿಯಲ್ಲಿ ವಿದೇಶ ಪ್ರವಾಸ ಕೈಗೊಂಡು ಆಯಾ ರಾಷ್ಟ್ರಗಳ ಸರ್ಕಾರ ಮತ್ತು ಸಂಸ್ಥೆಗಳಿಂದ ಆತಿಥ್ಯ ಸ್ವೀಕರಿಸಿದರೆ ಅಂಥ ವಿವರಗಳನ್ನು ಲೋಕಸಭೆ ಸ್ಪೀಕರ್‌ ಅಥವಾ ರಾಜ್ಯಸಭೆ ಸಭಾಪತಿಗೆ ನೀಡಬೇಕು ಎಂದು ಅವರು ಮಂಡಿಸಿರುವ ಜನಪ್ರಾತಿನಿಧ್ಯ (ತಿದ್ದುಪಡಿ) ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ ಸೆಕ್ಷನ್‌ 9ರ ಅನ್ವಯ ಪ್ರವಾಸದ ಬಗ್ಗೆ ಕೇಂದ್ರ ಸರ್ಕಾರದಿಂದ ಅನುಮತಿಯನ್ನೂ ಪಡೆದುಕೊಳ್ಳುವಂತೆ ಇರಬೇಕು ಎಂದು ವಿಧೇಯಕದಲ್ಲಿ ಸಲಹೆ ಮಾಡಲಾಗಿದೆ.

2017ರಲ್ಲಿಯೇ ಸಂಸದರು ವಿದೇಶ ಪ್ರವಾಸ ಕೈಗೊಳ್ಳಬೇಕಾದ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ ಹೆಚ್ಚಿನ ಸಂಸದರು ಅದನ್ನು ಅನುಸರಿಸುತ್ತಿಲ್ಲ ಎಂದು ನರಸಿಂಹ ರಾವ್‌ ವಿಷಾದಿಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವಿದೇಶ ಪ್ರವಾಸ ಕೈಗೊಳ್ಳುವಾಗೆಲ್ಲ ಅದರ ಮಾಹಿತಿಯನ್ನು ಮುಚ್ಚಿಡುತ್ತಾರೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಖಾಸಗಿ ಮಸೂದೆ ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next