Advertisement

ಬಿಜೆಪಿ ಕೆಲ ಶಾಸಕರು ಶೀಘ್ರ ಕಾಂಗ್ರೆಸ್‌ಗೆ: ಸಿಎಂ

07:55 AM Dec 02, 2017 | Team Udayavani |

ಬಾಗಲಕೋಟೆ: ಬಿಜೆಪಿಯ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಅವರು ಕಾಂಗ್ರೆಸ್‌ ಸೇರ್ಪಡೆಗೆ ಒಲವು ತೋರಿಸಿದ್ದು, ಸಂದರ್ಭ ಬಂದಾಗ ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬುದು ಬಹಿರಂಗಪಡಿಸುವೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಕಾರ್ಯಕ್ರಮವೊಂದಕ್ಕೆ ಶುಕ್ರವಾರ ಆಗಮಿಸಿ, ಹೆಲಿಪ್ಯಾಡ್‌ನ‌ಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರಲಿದ್ದಾರೆಂಬ ಬಿಎಸ್‌ವೈ ಹೇಳಿಕೆ ಸುಳ್ಳು. ನನ್ನೊಂದಿಗೆ ಕೆಲವು ಬಿಜೆಪಿ ಶಾಸಕರು
ಸಂಪರ್ಕದಲ್ಲಿದ್ದಾರೆ. ಎಷ್ಟು ಜನ ಇದ್ದಾರೆ ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಸಂದರ್ಭ ಬಂದಾಗ ಹೇಳುತ್ತೇನೆ. ಕಾಂಗ್ರೆಸ್ಸಿನ ಯಾವ ಶಾಸಕರೂ ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಪ್ರಧಾನಿ ಬಗ್ಗೆ ಅಸಂಸದೀಯ ಪದ ಬಳಸಿಲ್ಲ. ನನ್ನನ್ನು ಬಚ್ಚಾ, ಕುನ್ನಿ ಎಂದು ಕರೆದವರ ಸಂಸ್ಕೃತಿ ಏನು ಎಂಬುದು ಅವರ ಹೇಳಿಕೆಯಿಂದ ತಿಳಿಯುತ್ತದೆ. ಅಸಂಸದೀಯ ಪದ ಬಳಸುವ ಅನಂತಕುಮಾರ ಹೆಗಡೆ ಸಂಸದರಾಗಲು ಯೋಗ್ಯತೆ ಹೊಂದಿಲ್ಲ ಎಂದರು.

Advertisement

ಬಿಎಸ್‌ವೈ ವಿರುದ್ಧ ಮೊಕದ್ದಮೆಗೆ ಸಿದ್ಧತೆ ವಿಜಯಪುರ: ತಮ್ಮನ್ನು ಸಿಎಂ ಸಿದ್ದರಾಮಯ್ಯ ಅವರ ಕಮೀಷನ್‌ ಏಜೆಂಟ್‌ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಜಲ ಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ
ನಿರ್ಧರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಯಡಿಯೂರಪ್ಪ ಸತತವಾಗಿ ಕಾಂಗ್ರೆಸ್‌ ಸರ್ಕಾರ ಮತ್ತು ಜಲ ಸಂಪನ್ಮೂಲ ಸಚಿವ 
ಡಾ.ಎಂ.ಬಿ.ಪಾಟೀಲ ಸಿ.ಎಂ. ಸಿದ್ದರಾಮಯ್ಯ ಅವರ ಆರ್ಥಿಕ ಏಜೆಂಟ್‌ ಎಂದು ಟೀಕಿಸಿದ್ದಾರೆ. ಹೀಗಾಗಿ ಹೇಳಿಕೆಯನ್ನು ಗಂಭೀರವಾಗಿ
ಪರಿಗಣಿಸಿದ್ದು, ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿದ್ದೇನೆ. ಈ ಕುರಿತು ಶೀಘ್ರವೇ ನೋಟಿಸ್‌ ನೀಡುತ್ತೇನೆ ಎಂದಿದ್ದಾರೆ.

ಸಿಎಂ ಜತೆ ವಾಗ್ವಾದ: 8 ಜನರ ಬಂಧನ
ಬಾಗಲಕೋಟೆ: ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ಹೆಲಿಪ್ಯಾಡ್‌ನ‌ಲ್ಲಿ ಸೇರಿದ್ದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಪದಾಧಿಕಾರಿಗಳು, ಮುಖ್ಯಮಂತ್ರಿಗಳ ಜತೆಗೆ ವಾಗ್ವಾದ ನಡೆದು ಸಿಎಂ ಕುಪಿತಗೊಂಡ ಘಟನೆ ಶುಕ್ರವಾರ ಜರುಗಿತು. ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿಎಂ ದ್ದರಾಮಯ್ಯ ಹೆಲಿಪ್ಯಾಡ್‌ಗೆ ಆಗಮಿಸಿದಾಗ, ಕುರುಬ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ, ಸಾವಿರ ಕುರಿಗಳೊಂದಿಗೆ ಸಿಎಂಗೆ ಮುತ್ತಿಗೆ ಹಾಕಲು ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಪದಾಧಿಕಾರಿಗಳು ತಯಾರಿ ಮಾಡಿಕೊಂಡಿದ್ದರು. ಆದರೆ ಪೊಲೀಸರು ಕುರಿಗಳೊಂದಿಗೆ ತೆರಳಲು ಬಿಡದೆ ಮನವಿ ಸಲ್ಲಿಕೆಗೆ ಅವಕಾಶ ನೀಡಿದರು. ಮನವಿ ನೀಡಿದ ಸಂಘಟಕರು ಸಿಎಂ ಜೊತೆ ವಾಗ್ವಾದಕ್ಕಿಳಿದು ಸಿಎಂ ವಿರುದ್ಧ ಘೋಷಣೆ ಕೂಗಿದರು. 

ಸಿಡಿಮಿಡಿಗೊಂಡ ಸಿಎಂ ಸಿದ್ದರಾಮಯ್ಯ
“ಕುರುಬ ಸಮಾಜ ಎಸ್‌ಟಿಗೆ ಸೇರಿಸುವ ಬಗ್ಗೆ ನಾನು ಮಾತನಾಡಿಲ್ಲ ಎಂದರು. ಇದಕ್ಕೆ ಸಂಘಟನೆ ಪದಾಧಿಕಾರಿಗಳು
ಆಕ್ರೋಶಗೊಂಡು ಧಿಕ್ಕಾರ ಕೂಗಿದರು. ಆಗ ಮತ್ತಷ್ಟು ಕೋಪಗೊಂಡ ಸಿಎಂ ಸಿದ್ದರಾಮಯ್ಯ, “ಯಾರ್ರೀ ಇವರನ್ನು ಇಲ್ಲಿಗೆ ಬಿಟ್ಟಿದ್ದು, ಇವರನ್ನೆಲ್ಲ ಒಳಗೆ ಹಾಕಿ’ ಎಂದು ಎಸ್ಪಿಗೆ ಸೂಚಿಸಿದರು. ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ವೀರಣ್ಣ ಹಳೇಗೌಡರ, ಪದಾಧಿಕಾರಿ ಗಳಾದ ಮಲ್ಲು ಹನಗಂಡಿ, ರಮೇಶ ಹಿರಕನ್ನವರ, ರವಿ ಒಡ್ಡೋಡಗಿ, ಲಂಕೇಶ ಲಾಗನ್ನವರ, ಸೋಮು ಭೃರವಾಡಗಿ ಹಾಗೂ ಅಜಯ ಬಾರಕೇರ ಅವರನ್ನು ಪೊಲೀಸರು ವಶಕ್ಕೆ ಪಡೆದರು. 

ತಡರಾತ್ರಿವರೆಗೂ ಎಂಟೂ ಜನರನ್ನು ಪೊಲೀಸರು ಬಿಡುಗಡೆಗೊಳಿಸಿರಲಿಲ್ಲ. “ಕಂಬಳಿ ನೇಯ್ಗೆ, ಕುರಿಗಾರರ ಸಾಲಮನ್ನಾ ಶೀಘ್ರ’
ಬಾಗಲಕೋಟೆ: ರೈತರು, ನೇಕಾರರ ಸಾಲ ಮನ್ನಾ ಮಾಡಿರುವ ನಮ್ಮ ಸರ್ಕಾರ ಇದೀಗ ಕಂಬಳಿ ನೇಯ್ಗೆ ಮಾಡುವ ಹಾಗೂ ಕುರಿಗಾಹಿಗಳ ಸಾಲ ಮನ್ನಾ ಮಾಡಲು ಚಿಂತಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ
ಸುದ್ದಿಗಾರರ ಜೊತೆ ಮಾತನಾಡಿ, ನಮ್ಮ ಸರ್ಕಾರ ಇದೀಗ ಕಂಬಳಿ ನೇಯ್ಗೆ ಮಾಡುವ ಹಾಗೂ ಕುರಿಗಾಹಿಗಳ ಸಾಲ ಮನ್ನಾ ಮಾಡಲು ಚಿಂತಿಸಿದ್ದು, ಇದರ ಬಗ್ಗೆ ಲೆಕ್ಕ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಕೇಂದ್ರಕ್ಕೆ ರೈತರ ಬಗ್ಗೆ ಹೃದಯವಂತಿಕೆ ಇದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.

Advertisement

ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವಾಗ್ವಾದಕ್ಕಿಳಿದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಕಾರ್ಯಾಧ್ಯಕ್ಷ ವೀರಣ್ಣ ಹಳೇಗೌಡರ.  

Advertisement

Udayavani is now on Telegram. Click here to join our channel and stay updated with the latest news.

Next