Advertisement

ಕುತೂಹಲ ಮೂಡಿಸಿದ ಬಿಜೆಪಿ ಶಾಸಕರ ಸಭೆ

01:45 AM May 17, 2019 | Sriram |

ಬೆಂಗಳೂರು: ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಬಿಜೆಪಿಯಲ್ಲಿ ರಾಜಕೀಯ ಗರಿಗೆದರಿದ್ದು, ಮೇ 21ಕ್ಕೆ ಬಿಜೆಪಿ ಶಾಸಕರು, ಸಂಸದರ ಸಭೆ ಆಯೋಜಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಬರ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬರ ಪರಿಸ್ಥಿತಿ ಕುರಿತು ವಸ್ತುಸ್ಥಿತಿ ಅವಲೋಕಿಸಿ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈಗಾಗಲೇ ಸೂಚನೆ ನೀಡಿದ್ದರು. ಬರ ನಿರ್ವಹಣೆ ಕುರಿತ ಚರ್ಚೆಗೆಂದೇ ಮೇ 21ಕ್ಕೆ ಸಭೆ ಆಯೋಜನೆಯಾಗಿದೆ ಎಂದು ಹೇಳಲಾಗಿದೆ.

ಆದರೆ, ಮೇ 23ರಂದು ಪ್ರಕಟವಾಗುವ ಲೋಕಸಭಾ ಚುನಾವಣೆ ಹಾಗೂ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆ ಫ‌ಲಿತಾಂಶಕ್ಕೆ ಸಂಬಂಧಪಟ್ಟಂತೆ ಪೂರ್ವಭಾವಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ?: ಲೋಕಸಭಾ ಚುನಾವಣೆ ಫ‌ಲಿತಾಂಶದ ಜತೆಗೆ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ ದೃಷ್ಟಿಯಿಂದ ಮಹತ್ವ ದ್ದೆನಿಸಿರುವ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಫ‌ಲಿತಾಂಶ ಮೇ 23ರಂದು ಪ್ರಕಟವಾಗಲಿದ್ದು, ಶಾಸಕರನ್ನು ವಿಶ್ವಾಸದಲ್ಲಿರಿಸಿ ಕೊಂಡು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಮೇ 21ರಂದು ಶಾಸಕರ ಸಭೆ ಕರೆದಿರುವ ಸಾಧ್ಯತೆ ಇದೆ. ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ಅವರ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆ ಯಲ್ಲಿ ಹೊಸ ರಾಜ್ಯಾಧ್ಯಕ್ಷರ ಚರ್ಚೆಯೂ ಶುರುವಾಗಿದೆ. ಬಿಜೆಪಿ ನಿರೀಕ್ಷಿಸಿದಷ್ಟೂ ಸ್ಥಾನ ಗಳನ್ನು ಗೆದ್ದರೆ ಕ್ಷಿಪ್ರ ರಾಜಕೀಯ ಬದಲಾವಣೆ ಗಳಾಗಬಹುದು. ಪಕ್ಷದ ಶಾಸಕರನ್ನು ವಿಶ್ವಾಸದ ಲ್ಲಿಟ್ಟುಕೊಂಡು ಬದಲಾದ ಪರಿಸ್ಥಿತಿಯ ಲಾಭ ಪಡೆಯುವ ಲೆಕ್ಕಾಚಾರದಲ್ಲೇ ಸಭೆ ಕರೆದಿರಬಹುದು ಎನ್ನಲಾಗಿದೆ.

ಆಪರೇಷನ್‌ ಭೀತಿ: ಕಾಂಗ್ರೆಸ್‌, ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯವನ್ನು ಬಿಜೆಪಿ ತೆರೆಮರೆ ಯಲ್ಲೇ ನಡೆಸುತ್ತಿದೆ. ಈಗಾಗಲೇ ಹಲವು ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಹೇಳಿದ್ದಾರೆ. ಒಂದೊಮ್ಮೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದ್ದೇ ಆದರೆ ಆಗ ಸರ್ಕಾರ ರಚಿಸುವ ಉತ್ಸಾಹದಲ್ಲಿರುವ ಬಿಜೆಪಿಗೆ ಅಗತ್ಯ ಶಾಸಕ ಬಲವಿಲ್ಲದಿದ್ದರೆ ಅವಕಾಶ ಕೈತಪ್ಪಲಿದೆ. ಹಾಗಾಗಿ ಒಗ್ಗಟ್ಟು ಕಾಯ್ದುಕೊಳ್ಳುವ ಬಗ್ಗೆ ಸಭೆ ಕರೆದಿರುವುದರ ಹಿಂದಿನ ಕಾರ್ಯತಂತ್ರ ಎಂದು ಹೇಳಲಾಗಿದೆ. ಈ ನಡುವೆ ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ ಅವರನ್ನು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌, ಕಾಂಗ್ರೆಸ್‌ ಶಾಸಕ ಮಹೇಶ್‌ ಕುಮಟಳ್ಳಿ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ರೋಚಕ ರಾಜಕೀಯ ಬೆಳವಣಿಗೆ

ಬರ ಪರಿಸ್ಥಿತಿ ಅವಲೋಕನ ಉದ್ದೇಶ‌ದಿಂದ ಪಕ್ಷದ ಹಿರಿಯ ನಾಯಕರು ಮೇ 21ರಂದು ಸಭೆ ಕರೆದಿದ್ದಾರೆ. ಮೇ 23ಕ್ಕೆ ಫ‌ಲಿತಾಂಶ ಪ್ರಕಟವಾಗಲಿದ್ದು, ಯಾವ ರೀತಿಯ ಫ‌ಲಿತಾಂಶ ಬಂದರೂ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಬಹುದು. ಜತೆಗೆ ಎಲ್ಲ ಶಾಸಕರನ್ನೂ ವಿಶ್ವಾಸದಲ್ಲಿಟ್ಟುಕೊಳ್ಳುವ ಮೂಲಕ ಮುಂದಿನ ರಾಜಕೀಯ ನಿರ್ಧಾರಗಳಿಗೆ ಬೆಂಬಲವಾಗಿ ನಿಲ್ಲುವ ಸೂಚನೆ ನೀಡುವ ಸಂಭವವೂ ಇದೆ. ಒಟ್ಟಾರೆ ರಾಜ್ಯ ರಾಜಕೀಯದಲ್ಲಿ ರೋಚಕ ಬೆಳವಣಿಗೆಗೆ ದಿನ ಗಣನೆ ಶುರುವಾದಂತಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next