Advertisement

ಕರಾವಳಿ ನ್ಯಾಯಕ್ಕಾಗಿ ಶಾಸಕರ ಒಕ್ಕೂಟ

06:00 AM Jul 07, 2018 | |

ಬೆಂಗಳೂರು: ಬಜೆಟ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕರಾವಳಿ ಭಾಗದ ಜಿಲ್ಲೆಗಳ ಶಾಸಕರೆಲ್ಲಾ ಒಂದಾಗಿ ಒಕ್ಕೂಟ ರಚಿಸಿಕೊಂಡು ಜಿಲ್ಲೆಗಳಿಗೆ ಅಗತ್ಯ ಸವಲತ್ತು ಪಡೆದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೆ ಹೋರಾಟ ಮುಂದುವರಿಸಲು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಕರಾವಳಿ ಭಾಗದ ಮೂರು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಆ ಭಾಗದ ಶಾಸಕರು ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎಸ್‌. ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ರಘುಪತಿ ಭಟ್‌, ಸುನೀಲ್‌ ಕುಮಾರ್‌, ಸಂಜೀವ್‌ ಮಠಂದೂರು, ಸುನೀಲ್‌ ನಾಯ್ಕ, ವೇದವ್ಯಾಸ ಕಾಮತ್‌, ಡಾ.ಭರತ್‌ ಶೆಟ್ಟಿ, ಉಮಾನಾಥ್‌ ಕೋಟ್ಯಾನ್‌, ಯು. ರಾಜೇಶ್‌ ನಾಯ್ಕ, ಸುಕುಮಾರ ಶೆಟ್ಟಿ, ಹರೀಶ್‌ ಪೂಂಜಾ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬಜೆಟ್‌ನಲ್ಲಿ ಮೂರು ಜಿಲ್ಲೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಆ ಭಾಗದ ಬಿಜೆಪಿ ಶಾಸಕರು ಬಳಿಕ ಪ್ರತ್ಯೇಕ ಸಭೆಗಳನ್ನು ನಡೆಸಿ ಶುಕ್ರವಾರ ಬೆಳಗ್ಗೆ ಸಾಂಕೇತಿಕ ಧರಣಿ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಬಜೆಟ್‌ ಮೇಲಿನ ಚರ್ಚೆ ವೇಳೆಯೂ ಈ ತಾರತಮ್ಯವನ್ನು ತೀವ್ರವಾಗಿ ಖಂಡಿಸಲು ನಿರ್ಧರಿಸಿರುವ ಶಾಸಕರು, ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿಶ್ಚಯಿಸಿದ್ದಾರೆ.

ಶಾಸಕರ ಬೇಡಿಕೆ
ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ ನೀಡಬೇಕು. ಮೀನುಗಾರ ಮಹಿಳೆಯರಿಗೆ ಶೇ.2ರ ಬಡ್ಡಿದರದಲ್ಲಿ ಸಾಲ ವಿತರಣೆ ಭರವಸೆ ಈಡೇರಿಸಬೇಕು. ಕರಾವಳಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್‌ ನೀಡಬೇಕು. ಕರಾವಳಿ ಮತ್ತು ದೇವಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದು, ಅದಕ್ಕೆ ಆದ್ಯತೆ ನೀಡಬೇಕು ಎಂಬುದು ಆ ಭಾಗದ ಶಾಸಕರ ಒತ್ತಾಯ.

Advertisement

ಮೂರು ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ. ಬಂದರು, ವಿಮಾನನಿಲ್ದಾಣ, ರೈಲ್ವೆ ಸಂಪರ್ಕವಿದ್ದರೂ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿಲ್ಲ. ರಬ್ಬರ್‌ ಹಾಗೂ ಅಡಿಕೆಗೆ ಬೆಂಬಲ ಬೆಲೆ ನೀಡಿಲ್ಲ. ಮೂರು ಜಿಲ್ಲೆಗಳಲ್ಲಿ ಬಹುತೇಕ ರೈತರು ಸಾಲ ಮರುಪಾವತಿಸಿದ್ದು, ಸಾಲ ಮನ್ನಾದಿಂದ ಈ ಜಿಲ್ಲೆಗಳಲ್ಲಿ ಶೇ.5ರಷ್ಟು ರೈತರಿಗಷ್ಟೇ ಅನುಕೂಲವಾಗಲಿದೆ. ಒಟ್ಟಾರೆ ಸಮ್ಮಿಶ್ರ ಸರ್ಕಾರದ ಬಜೆಟ್‌ ಹಾಸನ, ರಾಮನಗರ, ಮಂಡ್ಯ ಜಿಲ್ಲಾ ಪಂಚಾಯ್ತಿ ಬಜೆಟ್‌ ನಂತಿದೆ ಎಂಬುದು ಈ ಶಾಸಕರ ಆರೋಪ.

ಪ್ರತಿಕ್ರಿಯೆ
ರಾಜ್ಯದ 225 ವಿಧಾನಸಭಾ ಕ್ಷೇತ್ರಗಳ ಆರೂವರೆ ಕೋಟಿ ಜನರ ಬಜೆಟ್‌ ಕೇವಲ ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಿಗೆ ಸೀಮಿತವಾಗಿದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ಉಪಯುಕ್ತವಾಗುವಂತಹ ಡೀಸೆಲ್‌ ಸಬ್ಸಿಡಿ, ಜಟ್ಟಿ ನಿರ್ಮಾಣ, ಕಡಿಮೆ ಬಡ್ಡಿ ದರದಲ್ಲಿ ಸಾಲದ ಬಗ್ಗೆ ಪ್ರಸ್ತಾಪವಿಲ್ಲ. ವರಾಹಿ, ಪಶ್ಚಿಮವಾಹಿನಿ ಕುಡಿಯುವ ನೀರಿನ ಯೋಜನೆ, ಮರಳು ನೀತಿಯ ಬಗ್ಗೆಯೂ ಉಲ್ಲೇಖವಿಲ್ಲ. ಆ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳ ಶಾಸಕರ ಒಕ್ಕೂಟ ರಚಿಸಿಕೊಂಡು ಹೋರಾಟ ನಡೆಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

ಇದೊಂದು ನಿರಾಶಾದಾಯಕ ಬಜೆಟ್‌. ಕರಾವಳಿ ಭಾಗಕ್ಕೆ ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ಮೀನುಗಾರರಾಗಲಿ, ಮೀನುಗಾರಿಕೆ ರಸ್ತೆ, ಗ್ರಾಮಾಂತರ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಯಾವುದೇ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸದಿರುವುದು ಖಂಡನೀಯ.
– ಹಾಲಾಡಿ ಶ್ರೀನಿವಾಸಶೆಟ್ಟಿ, ಕುಂದಾಪುರ ಶಾಸಕ

ಉಡುಪಿ ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕು ಘೋಷಣೆಯಾಗಿದ್ದರೂ ಕನಿಷ್ಠ ಅನುದಾನ ನೀಡಿಲ್ಲ. ಹೊಸ ತಾಲ್ಲೂಕು ನಿರ್ವಹಣೆ ಹೇಗೆ ಎಂಬುದರ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಪಕ್ಷದ ಹಿರಿಯರ ಸೂಚನೆಯಂತೆ ಮುಂದಿನ ಹೋರಾಟ ಕೈಗೊಳ್ಳುತ್ತೇವೆ.
– ಲಾಲಾಜಿ ಆರ್‌. ಮೆಂಡನ್‌, ಕಾಪು ಶಾಸಕ

ಕರಾವಳಿ ಜಿಲ್ಲೆಗಳ ಜನರಿಗೆ ಹೊಸ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಮೀನುಗಾರರಿಗೆ ಡೀಸೆಲ್‌ ಸಬ್ಸಿಡಿ, ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ವಿಶ್ವಾಸವಿತ್ತು. ದೇವಸ್ಥಾನಗಳಿಗೆ ಅಡ್ಡಬೀಳಲಷ್ಟೇ ನಮ್ಮ ಜಿಲ್ಲೆಯಿಲ್ಲ. ಆ ಜಿಲ್ಲೆಗಳ ಜನರ ಬಗ್ಗೆಯೂ ಕಾಳಜಿ ಇರಬೇಕು. ಮತ ಹಾಕಿಲ್ಲ ಎಂದು ಕರಾವಳಿ ಜನರ ಮೇಲೆ ಜೆಡಿಎಸ್‌, ಕಾಂಗ್ರೆಸ್‌ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ.
– ಸುನೀಲ್‌ ಕುಮಾರ್‌, ಕಾರ್ಕಳ ಶಾಸಕ

ರಾಜ್ಯ ಸರ್ಕಾರದ ಬಜೆಟ್‌ ಇತಿಹಾಸದಲ್ಲಿ ಮೀನುಗಾರರ ಸಮುದಾಯಕ್ಕೆ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಸ್ತಾಪವೇ ಇಲ್ಲದ ಮೊದಲ ಬಜೆಟ್‌ ಇದು. ಒಳನಾಡು ಮೀನುಗಾರಿಕೆ ಬಗ್ಗೆ ಉಲ್ಲೇಖವಿದ್ದರೂ ಅದು ಶೇ.25ರಷ್ಟು ಮೀನುಗಾರರಿಗಷ್ಟೇ ಅನ್ವಯಿಸುತ್ತದೆ. 78 ಪುಟಗಳ ಬಜೆಟ್‌ ಭಾಷಣ ಪುಸ್ತಕದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಹೆಸರೇ ಇಲ್ಲ. ರಸ್ತೆ, ಕುಡಿಯುವ ನೀರು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಉಲ್ಲೇಖವೇ ಇಲ್ಲ.
– ಸಂಜೀವ್‌ ಮಠಂದೂರು, ಪುತ್ತೂರು ಶಾಸಕ

ಇದು ಅಣ್ಣ- ತಮ್ಮ ಬಜೆಟ್‌. ಕರಾವಳಿಯಲ್ಲಿ ಭಾರಿ ಮಳೆಯಿಂದಾಗಿ ಮೀನುಗಾರರು ತೀವ್ರ ತೊಂದರೆಗೆ ಸಿಲುಕಿದ್ದು, ಅವರಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಪರಿಹಾರದ ಬಗ್ಗೆಯೂ ಉಲ್ಲೇಖವಿಲ್ಲ. ತಮಗೆ ಬೇಕಾದ ಮೂರು ಜಿಲ್ಲೆಗೆ ಆದ್ಯತೆ ನೀಡಿ ಜೆಡಿಎಸ್‌ನ 37 ಶಾಸಕ ಬಲವನ್ನು 60ಕ್ಕೆ ಹೆಚ್ಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಇದರ ವಿರುದ್ಧ ಸೋಮವಾರದಿಂದಲೇ ಸದನದೊಳಗೆ ಹೋರಾಟ ನಡೆಸಲಾಗುವುದು.
– ಸುನೀಲ್‌ ನಾಯಕ್‌, ಭಟ್ಕಳ ಶಾಸಕ

ತುಂಬೆಯಿಂದ ಮಂಗಳೂರಿಗೆ ಸಂಪರ್ಕಿಸುವ ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿ ಬಿಟ್ಟು ಕೊಡುವ ಭೂಮಾಲೀಕರಿಗೆ 120 ಕೋಟಿ ರೂ. ಪರಿಹಾರ ನೀಡುವಂತೆ ಕೋರಲಾಗಿತ್ತು. ಮಳೆ ಹಾನಿ ಪರಿಹಾರ ರೂಪದಲ್ಲಿ ವಿಶೇಷ ಪ್ಯಾಕೇಜ್‌ಗೂ ಮನವಿ ಮಾಡಲಾಗಿತ್ತು. ಇಡೀ ಬಜೆಟ್‌ನಲ್ಲಿ ಕರಾವಳಿ ಎಂಬ ಪದವೇ ಇಲ್ಲದಿರುವುದು ದುಃಖದ ಸಂಗತಿ.
– ವೇದವ್ಯಾಸ ಕಾಮತ್‌, ಮಂಗಳೂರು ದಕ್ಷಿಣ ಶಾಸಕ

ಕೃತಕ ನೆರೆಯಿಂದ ಭಾರೀ ಪ್ರಮಾಣದಲ್ಲಿ ಜನರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಆ ನಷ್ಟ ಭರಿಸುವ ಯಾವುದೇ ಪ್ರಯತ್ನ ಬಜೆಟ್‌ನಲ್ಲಿ ಕಾಣುತ್ತಿಲ್ಲ. ಮಂಗಳೂರು ನಗರವನ್ನು ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿಪಡಿಸುವ ಯಾವುದೇ ಪ್ರಸ್ತಾಪವೂ ಇಲ್ಲ.
– ಡಾ.ಭರತ್‌ ಶೆಟ್ಟಿ, ಮಂಗಳೂರು ಉತ್ತರ ಶಾಸಕ

ಮೂಡಬಿದಿರೆಯಲ್ಲಿ ಪಿಳಿಕುಳ ನಿಸರ್ಗಧಾಮ, ಸಮುದ್ರ ಕಿನಾರೆ, ಜೈನಕಾಶಿ ಎಂದೇ ಪ್ರಖ್ಯಾತವಾದ ಸಾವಿರ ಕಂಬಗಳ ಬಸದಿ ಇದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಉಲ್ಲೇಖವಿಲ್ಲ. ಮೂಡಬಿದಿರೆ ತಾಲ್ಲೂಕು ಕೇಂದ್ರವಾಗಿ ಐದು ವರ್ಷಗಳಾದರೂ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಬಜೆಟ್‌ನಲ್ಲೂ ಅನ್ಯಾಯವಾಗಿದೆ.
– ಉಮಾನಾಥ್‌ ಕೋಟ್ಯನ್‌, ಮೂಡಬಿದಿರೆ ಶಾಸಕ

ಬಜೆಟ್‌ನಲ್ಲಿ ನಮ್ಮ ಜಿಲ್ಲೆಯನ್ನು ಕಡೆಗಣಿಸುವ ಮೂಲಕ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ ಅನ್ಯಾಯವಾಗಿದೆ. ಇದನ್ನು ಖಂಡಿಸಿ ಸಾಂಕೇತಿಕ ಪ್ರತಿರೋಧ ವ್ಯಕ್ತಪಡಿಸಿದ್ದೇವೆ. ಹೋರಾಟದ ಹಿನ್ನೆಲೆಯಲ್ಲಿ ಬಂದ ಪಕ್ಷದವರಾದ ನಾವು ಮುಂದೆಯೂ ಹೋರಾಟ ಮುಂದುವರಿಸುತ್ತೇವೆ.
– ಯು. ರಾಜೇಶ್‌ ನಾಯಕ್‌, ಬಂಟ್ವಾಳ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next