ಹೊಸದಿಲ್ಲಿ : ‘ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕಟ್ಟದಿದ್ದರೆ ನಾನು ಮುಸ್ಲಿಮರಿಗೆ ಮಕ್ಕಾ – ಮದೀನಕ್ಕೆ ಹೋಗಲು ಬಿಡುವುದಿಲ್ಲ’ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಬೃಜ್ ಭೂಷಣ್ ರಾಜಪೂತ್ ಗುಡುಗಿದ್ದಾರೆ. ಆ ಮೂಲಕ ಯೋಗಿ ಆದಿತ್ಯನಾಥ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಈಚೆಗೆ ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ಉಗ್ರ ದಾಳಿ ನಡೆದು ಏಳು ಮಂದಿ ಹತರಾಗಿರುವ ಹಿನ್ನೆಲೆಯಲ್ಲಿ ತನ್ನ ಕೋಪೋದ್ರೇಕವನ್ನು ಪ್ರದರ್ಶಿಸಿರುವ ಬೃಜ್ ಭೂಷಣ್ ರಾಜಪೂತ್ ಅವರು ಹಜ್ ಯಾತ್ರೆ ಕೈಗೊಳ್ಳುವವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ.
ಈ ಕುರಿತಾದ ತನ್ನ ಮಾತುಗಳನ್ನು ಒಳಗೊಂಡ ವಿಡಿಯೋವನ್ನು ಕೂಡ ಆತ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು ಅದು ವೈರಲ್ ಆಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಷದ ನಾಯಕರಿಗೆ ವಿವೇಚನೆ ಇಲ್ಲದ, ಅನಗತ್ಯ ವಿವಾದಗಳನ್ನು ಸೃಷ್ಟಿಸುವ, ಮಾತುಗಳನ್ನು ಆಡಕೂಡದೆಂದು ಕಟ್ಟುನಿಟ್ಟಾಗಿ ಸೂಚಿಸಿರುವ ಹೊರತಾಗಿಯೂ ಶಾಸಕ ಬೃಜ್ ಭೂಷಣ್ ಈ ರೀತಿಯ ಉದ್ರೇಕಕಾರಿ, ಪ್ರಚೋದನಕಾರಿ ಮಾತುಗಳನ್ನು ಆಡಿರುವುದು ಅಚ್ಚರಿ ಉಂಟುಮಾಡಿದೆ.
“ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಕ್ಕೆ ಒಂದೊಮ್ಮೆ ಮುಸ್ಲಿಂ ಸಮಾಜದವರು ಅಡೆತಡೆ ಒಡ್ಡಿದರೆ ಮುಸ್ಲಿಮರು ಮಕ್ಕಾ – ಮದೀನಕ್ಕೆ ಹೋಗುವುದನ್ನು ತಡೆಯು ಕೆಲಸವನ್ನು ನಿಮ್ಮ ವಿಧಾಯಕ ಗುಡ್ಡು ರಾಜಪೂತ್ ಮಾಡಿಯೇ ತೀರುತ್ತಾನೆ’ ಎಂದು ವಿಡಿಯೋದಲ್ಲಿ ಹೇಳಿರುವುದು ಕಂಡು ಬರುತ್ತದೆ.