ಲಕ್ನೋ(ಉತ್ತರಪ್ರದೇಶ): ಭಾರತೀಯ ಜನತಾ ಪಕ್ಷ(BJP)ದ ಶಾಸಕ ಯೋಗೇಶ್ ವರ್ಮಾ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ (ಅ.09) ನಡೆದಿದ್ದು, ಇದು ಲಖೀಂಪುರ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಲು ಎಡೆಮಾಡಿಕೊಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ(Viral Viedo) ಸ್ಥಳೀಯ ಕೋರ್ಟ್ ನ ಬಾರ್ ಅಸೋಸಿಯೇಶನ್ ಅಧ್ಯಕ್ಷ ಅವಧೇಶ್ ಸಿಂಗ್ ಶಾಸಕ ವರ್ಮಾ ಅವರಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸೆರೆಯಾಗಿದೆ. ನಂತರ ಅವಧೇಶ್ ಬೆಂಬಲಿಗರು ವರ್ಮಾ ಅವರನ್ನು ಹಿಡಿದು ಎಳೆದಾಡಿರುವ ಘಟನೆ ನಡೆದಿದೆ.
ಸ್ಥಳದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಹಾಜರಿದ್ದರು ಕೂಡಾ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ವರದಿ ವಿವರಿಸಿದೆ. ಅರ್ಬನ್ ಬ್ಯಾಂಕ್ ಮ್ಯಾನೇಜ್ ಮೆಂಟ್ ಕಮಿಟಿ ಚುನಾವಣೆಯ ಸಿದ್ಧತೆ ನಡೆಯುತ್ತಿರುವ ವೇಳೆ ಘರ್ಷಣೆ ನಡೆದಿದೆ.
ಈ ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸುನೀಲ್ ಸಿಂಗ್ ಮತ್ತು ಶಾಸಕ ಯೋಗೇಶ್ ವರ್ಮಾ ಮನವಿ ಮಾಡಿಕೊಂಡಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಈ ಮಾರಾಮಾರಿ ನಡೆಯಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 14ರಂದು ನಡೆಯಲಿರುವ ಚುನಾವಣೆಯಲ್ಲಿ ಅಂದಾಜು 12,000 ಷೇರುದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲಾಗುವುದು ಎಂದು ಎಡಿಎಂ ಸಂಜಯ್ ಸಿಂಗ್ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.