Advertisement

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರತಿಭಟನೆ

02:51 PM Jul 02, 2022 | Team Udayavani |

ಬೆಂಗಳೂರು: ಉದಯಪುರ ಹತ್ಯೆ ಖಂಡಿಸಿ ಕಾಂಗ್ರೆಸ್ ದೇಶದೆಲ್ಲೆಡೆ ಯಾಕೆ ಪ್ರತಿಭಟನೆ ಮಾಡಿಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ಆಗ್ರಹಿಸಿದರು.

Advertisement

ಉದಯಪುರದಲ್ಲಿ ನಡೆದ ಬಡ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆಯನ್ನು ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಬೆಂಗಳೂರಿನ “ಫ್ರೀಡಂ ಪಾರ್ಕ್” ಬಳಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜಸ್ಥಾನದ ಕಾಂಗ್ರೆಸ್ ಸರಕಾರ ಬಹುತೇಕ ಸತ್ತುಹೋಗಿದೆ ಎಂದ ಅವರು, ಕೊಲೆಗಡುಕರನ್ನು ಕೂಡಲೇ ರಸ್ತೆ ಮಧ್ಯದಲ್ಲಿ ಗಲ್ಲಿಗೇರಿಸಲು ಒತ್ತಾಯಿಸಿದರು.

ಕೊಲೆಗಡುಕರು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಬಂಧುಗಳು ದೂರ ಸರಿದು, ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪ್ರಧಾನಮಂತ್ರಿಗಳಿಗೇ ಈ ಹಂತಕರು ಎಚ್ಚರಿಕೆ ನೀಡಿದ್ದಾರೆ. ಕೊಲೆಯ ವಿಡಿಯೋ ಸಾಕ್ಷಿ ನೀಡಿದ್ದು, ಅವರನ್ನು ತಕ್ಷಣ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

ಕೋತಿನ್ಯಾಯ ರೀತಿಯಲ್ಲಿ ವರ್ತಿಸುವ ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಬಂಧುಗಳು ದೂರ ಸರಿಯಬೇಕಿದೆ ಎಂದು ಅವರು ಮನವಿ ಮಾಡಿದರು. ಮುಸ್ಲಿಂ ಬುದ್ಧಿಜೀವಿಗಳು ಮತ್ತು ಚಿಂತಕರು ಇಂಥ ಕೊಲೆಯನ್ನು ಖಂಡಿಸಬೇಕಿದೆ ಎಂದರು.

ಹತ್ಯೆಗೆ ರಾಜಸ್ಥಾನದ ಕಾಂಗ್ರೆಸ್ ಸರಕಾರವೇ ಹೊಣೆ ಹೊರಬೇಕು ಎಂದು ಅವರು ತಿಳಿಸಿದರು. ಬಟ್ಟೆ ಅಳತೆ ಕೊಡುವ ನೆಪದಲ್ಲಿ ಬಂದು ಕತ್ತನ್ನು 26 ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಹಂತಕರು ಪ್ರಧಾನಮಂತ್ರಿಗಳಿಗೂ ಬೆದರಿಕೆ ಹಾಕಿದ್ದಾರೆ. ಇದರ ಕುರಿತು ತನಿಖೆ ಮಾಡಬೇಕಲ್ಲ ಎಂದರು.

Advertisement

ರಾಜ್ಯದಲ್ಲಿ ಸಿದ್ದರಾಮಯ್ಯ ಅವರೂ ಪಿಎಫ್‍ಐ, ಎಸ್‍ಡಿಪಿಐ ಮತ್ತಿತರ ಸಂಘಟನೆಗಳ 1600 ಜನರ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದರು. ಅವರ ಈ ದ್ವಿಮುಖ ನೀತಿಯನ್ನು ಬಿಜೆಪಿ ಖಂಡಿಸುತ್ತದೆ. ಬಿಗ್ ಬ್ರದರ್ ಡಿ.ಕೆ.ಶಿವಕುಮಾರ್ ಅವರಿಗೆ ಅಲ್ಪಸಂಖ್ಯಾತರ ಏಳಿಗೆ ಬೇಕಿಲ್ಲ. ಅವರ ಮತಗಳು ಮಾತ್ರ ಬೇಕಿದೆ ಎಂದು ಟೀಕಿಸಿದರು.

ಕನ್ಹಯ್ಯಲಾಲ್ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ರಾಜಸ್ಥಾನದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟ ಕಾರಣ ರಾಷ್ಟ್ರಪತಿ ಆಳ್ವಿಕೆ ವಿಧಿಸುವಂತೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಸೈಯದ್ ಸಲಾಂ ಅವರು ಆಗ್ರಹಿಸಿದರು. ಪ್ರತಿ ಜಿಲ್ಲೆ, ತಾಲ್ಲೂಕು, ಮಂಡಲ ಮತ್ತು ಬೂತ್ ಮಟ್ಟದಲ್ಲಿ ಇದೇ ಮಾದರಿಯಲ್ಲಿ ಪ್ರತಿಭಟನೆಯನ್ನು ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next