ಹೊಸದಿಲ್ಲಿ : ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈಲಾಸ ಮಾನಸ ಸರೋವರ ಯಾತ್ರೆಯ ಫೋಟೋಗಳು ಸಾಚಾ ಅಲ್ಲ, ಅವುಗಳನ್ನು ಫೋಟೋಶಾಪ್ ಮಾಡಲಾಗಿದೆ’ ಎಂದು ಬಿಜೆಪಿ ಸಂಸದ ಮತ್ತು ಸಹಾಯಕ ಸಚಿವರಾಗಿರುವ ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ.
‘ರಾಹುಲ್ ಗಾಂಧಿ ಅವರು ಯಾತ್ರಿಕರೊಬ್ಬರೊಂದಿಗೆ ನಿಂತಿರುವ ಚಿತ್ರದಲ್ಲಿ ರಾಹುಲ್ ಹಿಡಿದಿರುವ ಕೋಲಿನ ನೆರಳೇ ಕಾಣಿಸುವುದಿಲ್ಲ’ ಎಂದು ಗಿರಿರಾಜ್ ಅವರು ತಮ್ಮ ಟ್ವೀಟ್‌ನಲ್ಲಿ ಆಕ್ಷೇಪಿಸಿದ್ದಾರೆ.
ರಾಹುಲ್ ಅವರ ಕೈಲಾಸ ಮಾನಸ ಸರೋವರ ಯಾತ್ರೆಯ ಫೋಟೋ ಮತ್ತು ವಿಡಿಯೋಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದ್ದು ಅವು ವೈರಲ್ ಆಗಿವೆ.
ಇದೇ ವೇಳೆ ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡದ ರಾಷ್ಟ್ರೀಯ ಪ್ರಭಾರೆಯಾಗಿರುವ ಪ್ರೀತಿ ಗಾಂಧಿ ಅವರು ಕೂಡ ಟ್ವೀಟ್ ಮಾಡಿ “ರಾಹುಲ್, ನೀವು ಇಂಟರ್‌ನೆಟ್ ನಿಂದ ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದೀರಾ ? ನಿಜಕ್ಕೂ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
”ರಾಹುಲ್ ಅವರ ಯಾತ್ರೆಯ ಫೋಟೋಗಳಲ್ಲಿ ಕೇವಲ ಕೈಲಾಸ ಪರ್ವತ, ಮಾನಸ ಸರೋವರದ ದೃಶ್ಯಗಳಿವೆಯೇ ಹೊರತು ಎಲ್ಲೂ ರಾಹುಲ್ ಕಾಣಿಸುವುದಿಲ್ಲ ಎಂಬುದು ಪ್ರೀತಿ ಗಾಂಧಿ ಅವರ ಆಕ್ಷೇಪವಾಗಿದೆ. ಈ ರೀತಿಯ ಫೋಟೋಗಳನ್ನು ಯಾರೂ ಗೂಗಲ್ ಸರ್ಚ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಬಳಸಬಹುದಾಗಿದೆ” ಎಂದಾಕೆ ವ್ಯಂಗ್ಯವಾಡಿದ್ದಾರೆ.
ರಾಹುಲ್ ಅವರು ತಮ್ಮ ಯಾತ್ರೆಯ ಆರಂಭದಲ್ಲಿ ಹೊಟೇಲೊಂದರಲ್ಲಿ ಚಿಕನ್ ಸೂಪ್ ಸವಿದಿದ್ದರು ಎಂಬ ವದಂತಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಆ ಹೊಟೇಲ್ ನವರು “ರಾಹುಲ್ ನಮ್ಮ ಹೊಟೇಲ್‌ನಲ್ಲಿ ಪ್ಯೂರ್ ವೆಜ್ ಖಾದ್ಯಗಳನ್ನು ಮಾತ್ರವೇ ಆರ್ಡರ್ ಮಾಡಿ ಸವಿದಿದ್ದಾರೆ’ ಎಂದು ಸ್ಪಷ್ಟನೆ ಪ್ರಕಟಿಸಿದ್ದರು.