Advertisement

ನಾಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ! ಚುನಾವಣ ವಿಜಯಯಾತ್ರೆಗೆ ಮುನ್ನುಡಿ: ಕೋಟ

11:07 AM Nov 04, 2020 | sudhir |

ಮಂಗಳೂರು: ನಗರದಲ್ಲಿ ನ. 5ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್‌ ಕಮಿಟಿ ಸಭೆಯು ಮುಂಬರುವ ಗ್ರಾ. ಪಂ. ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿಜಯಯಾತ್ರೆಗೆ ಮುನ್ನುಡಿ ಬರೆಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆಯು ಮುಂಬರುವ ಸರಣಿ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಪಕ್ಷದ ಸಂಘಟನೆ ಹಾಗೂ ಚುನಾವಣ ಕಾರ್ಯತಂತ್ರ ಕುರಿತಾದ ಚರ್ಚೆ ಮುನ್ನೆಲೆಗೆ ಬರಲಿದೆ ಎಂದರು.

20 ವರ್ಷಗಳ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ತೀರ್ಮಾನ ಕೈಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಯೋಚನೆ ಪಕ್ಷ ಸಂಘಟನೆ ಉದ್ದೇಶದಿಂದ ಅತ್ಯಂತ ಮಹತ್ವದ್ದಾಗಿದೆ ಎಂದರು.

ಇಂದು ಸಿಎಂ ಮಂಗಳೂರಿಗೆ
ಸಿಎಂ ಯಡಿಯೂರಪ್ಪ ನ.4ರಂದು ರಾತ್ರಿ ಜಿಲ್ಲೆಗೆ ಆಗಮಿಸಲಿದ್ದಾರೆ. ನ.5ರಂದು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದ ಬಳಿಕ 11.30ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯ ಪ್ರ. ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಮಾತನಾಡಿ, ಸಭೆಯ ಯಶಸ್ಸಿಗೆ ಬಿಜೆಪಿ ದ.ಕ. ಜಿಲ್ಲಾ ಘಟಕ ಶ್ರಮ ವಹಿಸುತ್ತಿದೆ. ಪ್ರತಿನಿಧಿಗಳಿಗೆ ಬೇಕಾದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಲು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಪ್ರಮುಖರಾದ ಉದಯ್‌ ಕುಮಾರ್‌ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ರಾಜೇಶ್‌ ಕಾವೇರಿ, ಜಗದೀಶ ಶೇಣವ ಮುಂತಾದವರು ಉಪಸ್ಥಿತರಿದ್ದರು.

ಪಂಚರತ್ನ ಸಮಿತಿ; ಬಿಜೆಪಿ ಸಂಕಲ್ಪ
ಮುಂಬರುವ ಗ್ರಾ.ಪಂ., ತಾ. ಪಂ., ಜಿ. ಪಂ., ವಿ. ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತೀ ಬೂತ್‌ನಲ್ಲಿ 5 ಜನರ ಪಂಚರತ್ನ ಸಮಿತಿ ರಚಿಸಲು ನಳಿನ್‌ ಕುಮಾರ್‌ ಕಟೀಲು ಸೂಚಿಸಿದ್ದಾರೆ. ಮುಂದಿನ ಚುನಾವಣೆ ವೇಳೆ ಸ್ಥಳೀಯವಾಗಿ ಯಾವುದೇ ಸಮಸ್ಯೆ, ಗೊಂದಲ, ಅಸಮಾಧಾನ ಆಗದಂತೆ ಈ ಸಮಿತಿ ನೋಡಿಕೊಳ್ಳಲಿದೆ. 16 ಜಿಲ್ಲೆಗಳಲ್ಲಿ ಈಗಾಗಲೇ ಸಮಿತಿ ರಚನೆಯಾಗಿದ್ದು, ಉಳಿದ ಜಿಲ್ಲೆಗಳಲ್ಲಿಯೂ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ತಿಳಿಸಿದರು.

ಸಭೆಗೆ 150 ಮಂದಿ ಪ್ರಮುಖರು
ಪಕ್ಷದ ರಾಜ್ಯ ವರಿಷ್ಠ ನಾಯಕರು, ಪದಾಧಿಕಾರಿಗಳು ಹಾಗೂ ವಿವಿಧಜವಾಬ್ದಾರಿಗಳನ್ನು ಹೊಂದಿರುವವರ ಸಹಿತ ಸುಮಾರು 150 ಮಂದಿ ಪ್ರಮುಖರು ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಭೆಯನ್ನು ಉದ್ಘಾಟಿಸುವರು. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮಾರ್ಗದರ್ಶನ ನೀಡುವರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ.

ಎರಡು ದಶಕಗಳ ಬಳಿಕ ಸಭೆ
ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ಮಂಗಳೂರಿನಲ್ಲಿ 2 ದಶಕಗಳ ಬಳಿಕ ನಡೆಯುತ್ತದೆ. 2001 ರಲ್ಲಿ ನಗರದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಆಗ ಬಸವರಾಜ ಪಾಟೀಲ್‌ ಸೇಡಂ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು ಎಂದು ಹಿರಿಯ ನಾಯಕರಾದ ಮೋನಪ್ಪ ಭಂಡಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next