Advertisement

ಜೆಡಿಎಸ್‌ ಅಧಿಕಾರದಾಹಕ್ಕೆ ಬಲಿಪಶು

06:30 AM May 26, 2018 | Team Udayavani |

ಮಾಜಿ ಸಿಎಂ ಯಡಿಯೂರಪ್ಪ ಅವರು ಎಚ್‌.ಡಿ.ದೇವೇಗೌಡ, ಅವರ ಪುತ್ರ ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ “ನಮ್ಮ ಹೋರಾಟ ಏನಿದ್ದರೂ ಅಧಿಕಾರ ದಾಹದಿಂದ ಕುಣಿದು ಕುಪ್ಪಳಿಸುತ್ತಿರುವ ಅಪ್ಪ ಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್‌ ವಿರುದ್ಧ ಅಲ್ಲ’ ಎಂದು ಘೋಷಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಕುರಿತು ಅನುಕಂಪದ ಮಾತನಾಡಿದ್ದಾರಲ್ಲದೆ, “ಇದು ಅಧಿಕಾರಕ್ಕಾಗಿ ಹುಟ್ಟಿಕೊಂಡ ಸಾಂದರ್ಭಿಕ ಶಿಶು’ ಎಂದು ಎಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.

Advertisement

ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರುತ್ತಿದ್ದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ಮೇಲೆ ಮಾತಿನ ವರಸೆಯೇ ಬದಲಾಗಿದೆ. ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠರ ವಿರುದ್ಧ ತಿರುಗಿ ಬಿದ್ದಿರುವ ಯಡಿಯೂರಪ್ಪ, ಕಾಂಗ್ರೆಸ್‌ ನಾಯಕರ ಬಗ್ಗೆ ಅನುಕಂಪದ ಮಾತುಗಳನ್ನು ಆಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರನ್ನು ಖಳನಾಯಕ ಎಂದು ಪ್ರೀತಿಯಿಂದ ಕರೆದರೂ ಅವರನ್ನು “ಮುಂದಿನ ಸಿಎಂ’ ಎಂದೂ ಹೇಳಿದ್ದಾರೆ. 

ಅಲ್ಲದೆ, “ನೀವಿಬ್ಬರೂ ಅಪ್ಪ-ಮಕ್ಕಳ ಅಧಿಕಾರದ ಆಸೆಗೆ ಬಲಿಪಶುಗಳಾ ಗುತ್ತೀರಿ’ಎಂಬ ವಿಷಾದದ ಮಾತುಗಳನ್ನೂ ಆಡಿದ್ದಾರೆ.

ಬಿಎಸ್‌ವೈ ಪ್ರತಿಪಕ್ಷ ನಾಯಕ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ ಬಿ.ಎಸ್‌.ಯಡಿಯೂರಪ್ಪ, ಉಪ ನಾಯಕರಾಗಿ ಗೋವಿಂದ ಕಾರಜೋಳ ನೇಮಕಗೊಂಡಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ ಸ್ಪೀಕರ್‌ ರಮೇಶ್‌ಕುಮಾರ್‌ ಅವರು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರತಿಪಕ್ಷ ನಾಯಕರಾಗಿ, ಗೋವಿಂದ ಕಾರಜೋಳ ಅವರನ್ನು ಉಪ ನಾಯಕರಾಗಿ ಬಿಜೆಪಿ ಆಯ್ಕೆ ಮಾಡಿರುವುದನ್ನು ಪ್ರಕಟಿಸಿದರು. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಗದೀಶ ಶೆಟ್ಟರ್‌ ಪ್ರತಿಪಕ್ಷ ನಾಯಕರಾಗಿದ್ದರು. ಆರ್‌. ಅಶೋಕ್‌ ಉಪ ನಾಯಕರಾಗಿ ಕಾರ್ಯನಿರ್ವಹಿಸಿದ್ದರು

ಕೊಳ್ಳಿದೆವ್ವದ ಬಾಯಲ್ಲಿ ಭಗವದ್ಗೀತೆ
ಅಧಿಕಾರವಿಲ್ಲದೆ 12 ವರ್ಷ ವನವಾಸ ಅನುಭವಿಸಿದ ಕುಮಾರಸ್ವಾಮಿಗೆ ಸಿಟ್ಟು, ಸೆಡವು, ರೋಷ, ಮಾತ್ಸರ್ಯ ಸಾಮಾನ್ಯ. ನಾಗರಹಾವಿನ ರೋಷಕ್ಕೆ 12 ವರ್ಷವಾದರೆ ಕುಮಾರಸ್ವಾಮಿ ರೋಷಕ್ಕೆ 12 ವರ್ಷಕ್ಕೂ ಹೆಚ್ಚು ಆಯಸ್ಸು. ದುರ್ಯೋದನ ಅವರ ಮನೆದೇವರಾಗಿರಬೇಕು.

Advertisement

ಆತನ ಲಾಂಛನ ನಾಗರಹಾವು. ವಿನಾಶವೇ ದುರ್ಯೋದನನ ಸಂಕಲ್ಪ.ಅದೇ ರೀತಿ ಕುಮಾರಸ್ವಾಮಿಗೂ ಕೂಡ. ಇಂತಹ ವಿನಾಶಕೋರನ ಬಾಯಲ್ಲಿ ವಿಕಾಸದ ಮಾತುಗಳು ಬರುವುದು ಕೊಳ್ಳಿ ದೆವ್ವ ಭಗವದ್ಗೀತೆ ಪಠಿಸುವಂತೆ. ಕುಮಾರಸ್ವಾಮಿ ಚರಿತ್ರೆಯೇ ಹಾಗೆ. ನಂಬಿದವರನ್ನು ಮುಗಿಸೋದು, ಅಧಿಕಾರದ ತೀಟೆ ತೀರಿಸಿಕೊಂಡು, ಅದಕ್ಕೆ ಸಹಕಾರ ನೀಡಿದವರನ್ನು ಬೀದಿಪಾಲು ಮಾಡಿ, ನಯವಂಚಕತನಕ್ಕೆ ಶರಣಾಗುವುದು. ತಾನು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುತ್ತಿರುವುದನ್ನು ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿ ಹೇಳಿಕೊಳ್ಳುತ್ತಿದ್ದಾರೆ. ಸಾಂದರ್ಭಿಕ ಶಿಶು ಎಂದರೆ ಬಣ್ಣ ಬದಲಿಸುವ ಊಸರವಳ್ಳಿ ಎನ್ನಲಾರೆ. ಊಸರವಳ್ಳಿಗೆ
ಕುತಂತ್ರ ಗೊತ್ತಿಲ್ಲ. ಸಂದರ್ಭಕ್ಕೆ ಸರಿಯಾಗಿ ಬಣ್ಣ ಬದಲಿಸುತ್ತದೆ ಅಷ್ಟೆ.

ಆದರೆ, ಈ ಸಾಂದರ್ಭಿಕ ಶಿಶು ಪಿತ್ರಾರ್ಜಿತ ಆಸ್ತಿ. ಅಧಿಕಾರಕ್ಕಾಗಿ ಹುಟ್ಟಿಕೊಂಡ ಸಾಂದರ್ಭಿಕ ಶಿಶು ಎಂದು ಯಡಿಯೂರಪ್ಪ ಹೇಳಿದರು.

ಜೆಡಿಎಸ್‌ -ಬಿಜೆಪಿ ಜಗಳ ಬಯಲು 
ಕಾಂಗ್ರೆಸ್‌ ಜತೆ ಸೇರಿ ಜೆಡಿಎಸ್‌ ಸರ್ಕಾ ರಚಿಸುತ್ತಿದ್ದಂತೆ 2006ರಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರದ “ಒಳ ಗುಟ್ಟು’ ಬಯಲಾಗಿದೆ.

ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರೇ ಇದನ್ನು ಬಹಿರಂಗಪಡಿಸಿದ್ದಾರೆ. ವಿಶ್ವಾಸಮತ ಯಾಚನೆ ಪ್ರಸ್ತಾವದ ಮೇಲೆ ಮಾತನಾಡಿದ ಯಡಿಯೂರಪ್ಪ, 2008ರಲ್ಲಿ 20 ತಿಂಗಳ ನಂತರ ಅಧಿಕಾರ ಕೊಡುವ ಸಂದರ್ಭದಲ್ಲಿ ವೆಸ್ಟೆಂಡ್‌ ಹೋಟೆಲ್‌ಗೆ ಅಪ್ಪ-ಮಕ್ಕಳು (ಕುಮಾರಸ್ವಾಮಿ-ದೇವೇಗೌಡ) ಬಂದು ಹಲವು ಷರತ್ತುಗಳನ್ನು ಹಾಕಲು ಶುರು ಮಾಡಿದರು. 20 ತಿಂಗಳು ಆದ ಮೇಲೆ ಏನು ಮಾಡಬೇಕು ಎಂಬ ಹೊಂದಾಣಿಕೆ ಮೊದಲೇ ಆಗಿತ್ತು.

ಅನಂತ್‌ಕುಮಾರ್‌, ಶೆಟ್ಟರ್‌, ಈಶ್ವರಪ್ಪ, ಚೆಲುವರಾಯ ಸ್ವಾಮಿ ಇದಕ್ಕೆ ಸಾಕ್ಷಿಯಾಗಿದ್ದರು. ಆದರೆ, ಮೊದಲೇ ಆಗಿದ್ದ
ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡದೆ ಕುಮಾರಸ್ವಾಮಿ ವಿಶ್ವಾಸ ದ್ರೋಹ ಮಾಡಿದರು ಎಂದು 
ಆರೋಪಿಸಿದರು.ಇದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಅಪ್ತರೊಬ್ಬರಿಂದ ಚೀಟಿ ಕಳುಹಿಸಿ, ಬಿಜೆಪಿ ಬಿಟ್ಟು ಬರುತ್ತೇನೆ. ನನಗೆ ಮಂತ್ರಿ ಮಾಡಿ ಎಂದು ಬಿಎಸ್‌ವೈ ಕೇಳಿದ್ದರು. ಆದರೆ, ನಿಮ್ಮಂತ ನಾಯಕರು ಒಬ್ಬಂಟಿಯಾಗಿ ಬರುವುದು ಬೇಡ. 40 ಶಾಸಕರನ್ನು ಜತೆಗಿಟ್ಟುಕೊಂಡು ನೀವೇ ನಾಯಕರಾಗಿ ಎಂದು ಹೇಳಿ ಕಳುಹಿಸಿದ್ದೆ.ಈ ವೇಳೆ ಶೋಭಾ ಕರಂದ್ಲಾಜೆ ಕೂಡ ಇದ್ದರು ಎಂದರು.

ಭಾಷಣದ ನಂತರ ಸಭಾತ್ಯಾಗ
ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನ ಬಹಿಷ್ಕಾರ ಹಾಕಲು ಚಿಂತನೆ ನಡೆಸಿದ್ದ ಬಿಜೆಪಿ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಭಾಷಣ ಮಾಡಿದ ನಂತರ ಸಭಾತ್ಯಾಗ ಮಾಡುವ ತೀರ್ಮಾನ ಕೈಗೊಂಡಿತು. ಸ್ಪೀಕರ್‌ ಚುನಾವಣೆ ನಂತರ ಸದನ ಬಹಿಷ್ಕಾರ ಹಾಕುವ ಬಗ್ಗೆ ಮೊದಲು ಯೋಚಿಸಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಬದಲಿಸಿ, ಬಿ.ಎಸ್‌.ಯಡಿಯೂರಪ್ಪ ಅವರು ಮಾತನಾಡಿದ ನಂತರ ಸಭಾತ್ಯಾಗ ಮಾಡುವ ತಂತ್ರಗಾರಿಕೆ ಅನುಸರಿಸಿತು. 

ವಿಶ್ವಾಸಮತ ಸಂದರ್ಭದಲ್ಲಿ ಸದನದಲ್ಲಿ ಮಾತನಾಡಿದರೆ ಎಲ್ಲವೂ ದಾಖಲೆಗೆ ಹೋಗಲಿದ್ದು ಭಾಷಣ ದಾಖಲೆಯಾಗಿ ಉಳಿಯುತ್ತದೆ. ಹೀಗಾಗಿ,ಅಲ್ಲೇ ಮಾತನಾಡಬೇಕು. ಆ ನಂತರವೇ ಸಭಾತ್ಯಾಗ ಮಾಡಬೇಕು ಎಂದು ಪಕ್ಷದ ನಾಯಕರು ಸೂಚನೆ ನೀಡಿದ್ದರೆಂದು ಹೇಳಲಾಗಿದೆ.

ಸ್ವಾಮಿ, 219 ಕಡೆ ಸ್ಪರ್ಧೆ ಮಾಡಿ 38 ಸ್ಥಾನ ಗೆದ್ರಿ. 181 ಕಡೆ ಪರಾಭವಗೊಂಡು 121 ಕಡೆ ಠೇವಣಿ
ಕಳೆದುಕೊಂಡಿರಿ. 16 ಜಿಲ್ಲೆಗಳಲ್ಲಿ ಒಂದೂ ಸೀಟಿಲ್ಲ.ಅಂತಹ ಜೆಡಿಎಸ್‌ ನಾಯಕನನ್ನು ಕಾಂಗ್ರೆಸ್‌ನವರೆಲ್ಲಾ ಸೇರಿ ಮುಖ್ಯಮಂತ್ರಿ ಮಾಡಿ ಸದನದಲ್ಲಿ ವಿಶ್ವಾಸ ಕೇಳುವ ಪರಿಸ್ಥಿತಿ ತಂದೊಡ್ಡಿದ್ದೀರಿ.

– ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next