ಚಿಂಚೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ತಾಲೂಕಿನ ಅಭಿವೃದ್ದಿಗೋಸ್ಕರ ಸಾಕಷ್ಟು ಅನುದಾನ ಮಂಜೂರಿಗೊಳಿಸಿ ಅಭಿವೃದ್ಧಿಪಡಿಸಿದ್ದು, ಬರುವ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಡಾ|ಉಮೇಶ ಜಾಧವ್ ಹೇಳಿದರು.
ಚಂದಾಪುರದ ತಮ್ಮ ನಿವಾಸದಲ್ಲಿ ಶನಿವಾರ ತಾಲೂಕು ಮರಾಠಾ ಸಮಾಜ ತಾಲೂಕು ಅಧ್ಯಕ್ಷ ಶಾಮಸುಂದರ ಪವಾರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ನೀರಾವರಿ, ರಸ್ತೆ ಡಾಂಬರೀಕರಣ, ಸಿಮೆಂಟ್ ರಸ್ತೆ, ವಸತಿ ರಹಿತರಿಗೆ ಮನೆ ಮಂಜೂರು, ಬಹುಗ್ರಾಮ ಯೋಜನೆ, ಶಾಲಾ-ಕಾಲೇಜು ಕಟ್ಟಡ ನಿರ್ಮಾಣ, ಮಿನಿ ವಿಧಾನಸೌಧ ಕಟ್ಟಡ ಮಂಜೂರು, ವಿದ್ಯುತ್ ಉಪಕೇಂದ್ರ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ, ಸಣ್ಣ ಸೇತುವೆ ನಿರ್ಮಾಣ ಇನ್ನಿತರ ಅಭಿವೃದ್ಧಿಗೋಸ್ಕರ ಕಳೆದ ಐದು ವರ್ಷಗಳಲ್ಲಿ ಎರಡು ಸಾವಿರ ಕೋಟಿ ರೂ. ಗಳಿಗಿಂತ ಹೆಚ್ಚಿನ ಅನುದಾನ ಮಂಜೂರಿಗೊಳಿಸಿ ಐತಿಹಾಸಿಕ ಸಾಧನೆ ಮಾಡಿದ್ದೇನೆ ಎಂದರು.
ಮರಾಠ ಸಮಾಜದ ಅಧ್ಯಕ್ಷ ಶಾಮ ಸುಂದರ ಪವಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವುದರಿಂದ ನಮಗೆ ಹೆಚ್ಚಿನ ಶಕ್ತಿ ಬಂದಿದೆ ಎಂದರು.
ಜಿಪಂ ಸದಸ್ಯ ಗೌತಮ ಪಾಟೀಲ, ಶಾಮ ಸುಂದರ ಪವಾರ, ತಾಲೂಕು ಭೂನ್ಯಾಯ ಮಂಡಳಿ ಅಧ್ಯಕ್ಷ ಮಧುಸೂಧನರೆಡ್ಡಿ ಕಲ್ಲೂರ, ಅಬ್ದುಲ್ ರವೂಫ ಮಿರಿಯಾಣ, ಶಿವಶರಣಪ್ಪ ಪೊಲೀಸ್ ಪಾಟೀಲ, ಎಪಿಎಂಸಿ ನಿರ್ದೇಶಕ ವಿಠಲರೆಡ್ಡಿ ಬೆನಕೆಪಳ್ಳಿ, ಜಗದೀಶ ಪಾಟೀಲ ಕನಕಪುರ ಮಾತನಾಡಿದರು. ಪುರಸಭೆ ಸದಸ್ಯ ಅಬ್ದುಲ್ ಬಾಸೀತ ಸ್ವಾಗತಿಸಿದರು, ಶ್ರೀನಿವಾಸ ಚಿಂಚೋಳಿಕರ ನಿರೂಪಿಸಿದರು,
ಪ್ರಲ್ಹಾದ ರಾಠೊಡ ವಂದಿಸಿದರು