ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳು ಮಂಗಳವಾರ ಅಭ್ಯರ್ಥಿಯನ್ನು ಘೋಷಿಸಿವೆ.
ಅಚ್ಚರಿಯ ಆಯ್ಕೆಯಾಗಿ ಒಡಿಶಾದ ಬುಡಕಟ್ಟು ನಾಯಕಿ, ಝಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಕಣಕ್ಕಿಳಿಸುವುದಾಗಿ ಘೋಷಿಸಿದ್ದರೆ, ಬಿಜೆಪಿಯ ಮಾಜಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾರನ್ನು ವಿಪಕ್ಷಗಳು ಕಣಕ್ಕಿಳಿಸಿವೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸಂಸದೀಯ ಪಕ್ಷವು ಮಂಗಳವಾರ ಸಭೆ ನಡೆಸಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಸಭೆಗೆ ಮುನ್ನ ಅಮಿತ್ ಶಾ, ರಾಜನಾಥ ಸಿಂಗ್ ಮತ್ತು ಜೆ.ಪಿ. ನಡ್ಡಾ ಅವರು ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದರು.
ಯಶವಂತ್ ಸಿನ್ಹಾ ವಿಪಕ್ಷ ಅಭ್ಯರ್ಥಿ ವಿಪಕ್ಷಗಳು ಮಂಗಳವಾರ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿವೆ.
Related Articles
ಸಂಸತ್ ಭವನದಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯ ಅನಂತರ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರು.
ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಸಿನ್ಹಾ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಷ್ಟ್ರೀಯ ಕಾರಣಗಳಿಗೆ ದುಡಿಯುವುದಾಗಿ ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗಾಗಿ ಜೂನ್ 29ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜುಲೈ 18ರಂದು ಮತದಾನ ನಡೆಯಲಿದೆ.