ನವದೆಹಲಿ:ಲೋಕಸಭಾ ಚುನಾವಣಾ ಪ್ರಚಾರ ರಂಗೇರತೊಡಗಿದ್ದು, ಫೆಬ್ರುವರಿ 19ರಿಂದ ಈವರೆಗೆ ರಾಜಕೀಯ ಪಕ್ಷಗಳು ಖರ್ಚು ಮಾಡಿರುವ ಹಣ ಬರೋಬ್ಬರಿ 3.76 ಕೋಟಿ ರೂಪಾಯಿ. ಗೂಗಲ್ ಪ್ಲ್ಯಾಟ್ ಫಾರ್ಮ್ ನಲ್ಲಿ ರಾಜಕೀಯ ಪಕ್ಷಗಳು ನೀಡಿರುವ ಜಾಹೀರಾತಿನ ಬಗ್ಗೆ ಸರ್ಜ್ ಇಂಜಿನ್ ಗೂಗಲ್ ಗುರುವಾರ ಬಿಡುಗಡೆ ಮಾಡಿರುವ ಪಾರದರ್ಶಕ ವರದಿಯಲ್ಲಿ ಮಾಹಿತಿ ನೀಡಿದೆ.
ಪಾರದರ್ಶಕ ವರದಿ ಪ್ರಕಾರ, ಭಾರತೀಯ ಜನತಾ ಪಕ್ಷ ನಂಬರ್ ವನ್ ಸ್ಥಾನದಲ್ಲಿದ್ದೆ. ಕಳೆದ ಫೆಬ್ರುವರಿ 19ರಿಂದ ಏಪ್ರಿಲ್ 4ರವರೆಗೆ ಬಿಜೆಪಿ ಜಾಹೀರಾತಿಗಾಗಿ ಖರ್ಚು ಮಾಡಿರುವ ಹಣ 1.21 ಕೋಟಿ ರೂಪಾಯಿ ಎಂದು ತಿಳಿಸಿದೆ. ಕಾಂಗ್ರೆಸ್ ಪಕ್ಷ 6ನೇ ಸ್ಥಾನ ಪಡೆದಿದ್ದು, ಇದು ಗೂಗಲ್ ಜಾಹೀರಾತಿಗಾಗಿ ಖರ್ಚು ಮಾಡಿರುವುದು 54,100 ರೂಪಾಯಿ.
ಬಿಜೆಪಿ ನಂತರ ಆಂಧ್ರಪ್ರದೇಶದ ಜಗನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ 1.04 ಕೋಟಿ ರೂಪಾಯಿ ಜಾಹೀರಾತಿಗೆ ವ್ಯಯಿಸಿದ್ದು, ವೈಎಸ್ ಆರ್ ಪಕ್ಷದ ಅಭ್ಯರ್ಥಿ ಪಮ್ಮಿ ಸಾಯಿ ಚರಣ್ ರೆಡ್ಡಿ 26,400 ರೂಪಾಯಿ ಹಣ ಜಾಹೀರಾತಿಗೆ ಖರ್ಚು ಮಾಡಿರುವುದಾಗಿ ವರದಿ ವಿವರಿಸಿದೆ.
ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ(ಟಿಡಿಪಿ) ಮೂರನೇ ಸ್ಥಾನದಲ್ಲಿದ್ದು, ಇದು ಜಾಹೀರಾತಿಗಾಗಿ 85.25 ಲಕ್ಷ ರೂಪಾಯಿ ಖರ್ಚು ಮಾಡಿದೆ. ಏತನ್ಮಧ್ಯೆ ತಮ್ಮ ನಿಯಮಾವಳಿ ಉಲ್ಲಂಘಿಸಿದ್ದರಿಂದ ರಾಜಕೀಯ ಪಕ್ಷಗಳ ನಾಲ್ಕು ಅಂಗಸಂಸ್ಥೆಗಳ ಜಾಹೀರಾತನ್ನು ತಡೆಹಿಡಿಯಲಾಗಿದೆ ಎಂದು ಗೂಗಲ್ ತಿಳಿಸಿದೆ.