Advertisement

ಜೋಡೋಗೆ ಬೆಂಬಲ ಸಹಿಸದ ಬಿಜೆಪಿ ನಾಯಕರು: ಆರೋಪ

05:03 PM Sep 20, 2022 | Team Udayavani |

ಚಾಮರಾಜನಗರ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಪಾದ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿ ರುವುದನ್ನು ಸಹಿಸಿಕೊಳ್ಳದೇ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆರೆಹಳ್ಳಿ ನವೀನ್‌ ಟೀಕಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾ ಅಧ್ಯಕ್ಷ ನಿಜಗುಣರಾಜು ಅವರು ಯಾರನ್ನೋ ಓಲೈಸುವ ಸಲುವಾಗಿ, ಹತಾಶೆಯಿಂದ ರಾಹುಲಗಾಂಧಿಯವರ ಯಾತ್ರೆಯನ್ನು ಅದು ಭಾರತ್‌ ಜೋಡೋ ಅಲ್ಲ ಕಾಂಗ್ರೆಸ್‌ ಛೋಡೋ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಕಾಂಗ್ರೆಸ್‌ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಏಕೆಂದರೆ ರಾಜ್ಯ, ದೇಶದಲ್ಲಿ ಬಿಜೆಪಿ ಸರ್ಕಾರ ಇದ್ದು, ಜಿಲ್ಲೆಯ ಅಭಿವೃದ್ಧಿಗೆ ಈ ಸರ್ಕಾರಗಳ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ನಿಜಗುಣರಾಜು ಅವರಿಗೆ ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರೆ. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅವರ ರೆಸಾರ್ಟ್‌ ಮುಂದೆ ರಸ್ತೆ ಅಗಲೀಕರಣಕ್ಕೆ ಜಾಗ ಕೊಡಬೇಕಾಗಿತ್ತು. ಇವರು ಜಾಗ ಬಿಡದ ಕಾರಣ ಅಲ್ಲಿ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಇವರ ಸರ್ಕಾರದ ಒಬ್ಬ ಸಚಿವರೂ ಭೇಟಿ ನೀಡಲಿಲ್ಲ. ಪರಿಹಾರ ಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕೆ ಮಾಡಲು ಇವರಿಗೆ ನೈತಿಕತೆ ಏನಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಸಂಸದರಾಗಿದ್ದ ಅವಧಿಯಲ್ಲಿ ಕ್ಷೇತ್ರದಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿ ದೇಶದಲ್ಲಿ 5ನೇ ರಾಜ್ಯದಲ್ಲಿ ನಂಬರ್‌ ಒನ್‌ ಸಂಸದರಾಗಿದ್ದರು. ಈ ಸಮೀಕ್ಷೆ ನಡೆಸಿದ್ದು ನಮ್ಮ ಪಕ್ಷದವರಲ್ಲ, ಪತ್ರಿಕೆಗಳು. ಅವರಿದ್ದ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೇಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು. ಈಗ ಹೇಗೆ ನಡೆಯುತ್ತಿವೆ ಎಂಬುದನ್ನು ಅವರು ಹೋಲಿಸಿ ನೋಡಲಿ. ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದವರು ನೀವು ಎಂದು ನವೀನ್‌ ಕಿಡಿಕಾರಿದರು.

ತಮ್ಮ ಸರ್ಕಾರ ಮಹಿಳೆಯರ ಸಬಲೀಕರಣ ಮಾಡುತ್ತಿದೆ ಎಂದು ಕಾಡಾ ಅಧ್ಯಕ್ಷರು ಹೇಳಿದ್ದಾರೆ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕೊಟ್ಟಿರುವುದು ಕಾಂಗ್ರೆಸ್‌ ಸರ್ಕಾರ. ಸ್ತ್ರೀ ಸ್ವಸಹಾಯ ಸಂಘಗಳನ್ನು ರಚಿಸಿ ಅವರು ಸ್ವಾವಲಂಬಿಗಳಾಗಲು ನೆರವಾಗಿದ್ದು ಕಾಂಗ್ರೆಸ್‌ ಸರ್ಕಾರ. ಇಲ್ಲಸಲ್ಲದ ಹೇಳಿಕೆ ನೀಡಿ, ಜಾತಿ, ಜಾತಿ ನಡುವೆ, ಧರ್ಮಧರ್ಮದ ನಡುವೆ ವಿಷಬೀಜ ಬಿತ್ತಿ ಕೋಮುಗಲಭೆ ಸೃಷ್ಠಿಸಿ ಕಾಲಾಹರಣ ಮಾಡುವವರು ನಿಮ್ಮ ಪಕ್ಷದ ನಾಯಕರು ಎಂದು ವ್ಯಂಗ್ಯವಾಡಿದರು. ಸುಳ್ಳು ಹೇಳುವುದೇ ಬಿಜೆಪಿಯವರ ಬಂಡವಾಳ, ಸುಳ್ಳು ಹೇಳುವುದರಲ್ಲಿ ಅವರನ್ನು ಮೀರಿಸುವವರಿಲ್ಲ. ಅವರನ್ನು ಸುಳ್ಳಿನ ಸರದಾರರು ಎಂದರೆ ತಪ್ಪಾಗಲಾರದು ಎಂದು ಕಟಕಿಯಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಮೇಶ್‌, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ವಕೀಲ ಅರುಣ್‌ಕುಮಾರ್‌, ದೇವರಾಜ್ ಸೈಯದ್‌ ಮುಜಾಹಿಬ್‌ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next