Advertisement

ಬಿಜೆಪಿ ಮುಖಂಡರಿಂದ ಡಿ.ಸಿ. ಕಚೇರಿಗೆ ಮುತ್ತಿಗೆ ಯತ್ನ; ಬಂಧನ

09:23 AM Sep 08, 2017 | Team Udayavani |

ಮಂಗಳೂರು: ರಾಜ್ಯ ಬಿಜೆಪಿ ಯುವಮೋರ್ಚಾ ಘಟಕ ಗುರು ವಾರ ನಗರದಲ್ಲಿ ಹಮ್ಮಿಕೊಂಡಿದ್ದ “ಮಂಗಳೂರು ಚಲೋ’ ಪ್ರಯುಕ್ತ ಬೈಕ್‌ ರ್ಯಾಲಿ ಯಲ್ಲಿ ಬಂದ ಪಕ್ಷದ ಕಾರ್ಯ ಕರ್ತರು, ಪೊಲೀಸರು ಹಾಕಿದ್ದ ಬ್ಯಾರಿ ಕೇಡನ್ನು ಭೇದಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಪೊಲೀಸರು ಪ್ರತಿಭಟನಕಾರರನ್ನು ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಬಳಿಯೇ ತಡೆದು ಬಂಧಿಸಿದರು.

Advertisement

ಜ್ಯೋತಿ ವೃತ್ತದ ಬಳಿಯಿಂದ ಬೈಕ್‌ ರ್ಯಾಲಿ ಹಾಗೂ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆ ಬಳಿಕ ನೆಹರೂ ಮೈದಾನದಲ್ಲಿ ಪ್ರತಿ ಭಟನ ಸಭೆ ನಡೆಸುವುದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಲೆಕ್ಕಾಚಾರವಾಗಿತ್ತು. ಆದರೆ ಜ್ಯೋತಿ ವೃತ್ತದ ಬಳಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬೈಕ್‌ ರ್ಯಾಲಿ ಅಥವಾ ಪಾದಯಾತ್ರೆ ಮೂಲಕ ಜಿಲ್ಲಾಧಕಾರಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಅವಕಾಶ ನೀಡಿರಲಿಲ್ಲ. ಈ ಕಾರಣಕ್ಕೆ ಜ್ಯೋತಿ ವೃತ್ತದಲ್ಲೇ ಬಹಿರಂಗ ಸಭೆಯನ್ನೂ ನಡೆಸಬೇಕಾಯಿತು. ಇನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಯ ಕರ್ತರನ್ನು ಪೊಲೀಸರು ಬಂಧಿಸುವುದಕ್ಕೆ ಮುಂದಾದಾಗ ನೂಕಾಟ-ತಳ್ಳಾಟವೂ ನಡೆಯಿತು. ಇದರಿಂದ ಕೆಲಹೊತ್ತು ಅಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು. ಆಕ್ರೋಶಗೊಂಡಿದ್ದ ಕಾರ್ಯಕರ್ತರನ್ನು ಸಮಾಧಾನಪಡಿಸುವಲ್ಲಿ ಪೊಲೀಸರು ಕೂಡ ಯಶಸ್ವಿಯಾದ ಕಾರಣ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ.

ಇನ್ನೊಂದೆಡೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನ ಸಭೆಯ ಅನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಾರೆ ಎನ್ನುವ ಮಾಹಿತಿ ಮೊದಲೇ ಪೊಲೀಸರಿಗೆ ಇತ್ತು. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಮುಖ್ಯ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತು ಮಾಡಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ಪಡೆ, ಕರ್ನಾಟಕ ಮೀಸಲು ಪೊಲೀಸ್‌ ಪಡೆಗೆ ಸೇರಿದ 200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬ್ಯಾರಿಕೇಡ್‌ ಭೇದಿಸಿದ ಸಂಸದರು
ಜ್ಯೋತಿ ವೃತ್ತದಿಂದ ತಪ್ಪಿಸಿ ಕೊಂಡು ಮೋಟಾರ್‌ ಬೈಕ್‌ನಲ್ಲಿ ಕಾರ್ಯಕರ್ತರೊಂದಿಗೆ ಪಕ್ಷದ ಧ್ವಜ ಹಿಡಿದು ಬಂದ ಸಂಸದ ನಳಿನ್‌ ಕುಮಾರ್‌ ಕಟೀಲು, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್‌ಸಿಂಹ, ಶಾಸಕರಾದ ಸುನಿಲ್‌ ಕುಮಾರ್‌, ಸಿ.ಟಿ. ರವಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅವರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನೆಲ್ಲ ಬಂಧಿಸಿ ಕರೆದೊಯ್ದರು.

ಇದಾದ ಬಳಿಕ ಇನ್ನಷ್ಟು ಬಿಜೆಪಿ ಕಾರ್ಯಕರ್ತರು ಘೋಷಣೆಗಳೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯತ್ತ ಸಾಗಿ ಬಂದಿದ್ದು, ಪೊಲೀಸರು ಅವರನ್ನು ಕೂಡ ಬಂಧಿಸಿ ಬಸ್‌ ಮೂಲಕ ಅಲ್ಲೇ ಸಮೀಪದ ನೆಹರೂ ಮೈದಾನಕ್ಕೆ ಕರೆದೊಯ್ದರು. ಬಂಧನದ ವೇಳೆ ಕೆಲವು ಕಾರ್ಯಕರ್ತರು ತೀವ್ರ ಪ್ರತಿರೋಧ ಒಡ್ಡಿದರು. ಉದ್ರಿಕ್ತ ಪ್ರತಿಭಟನಕಾರರ ಕಡೆಯಿಂದ ಒಂದೆರಡು ಕಲ್ಲುಗಳು ಕೂಡ ಪೊಲೀಸರತ್ತ ತೂರಿ ಬಂದವು. ಆದರೆ ಪೊಲೀಸರು ತತ್‌ಕ್ಷಣ ಪರಿಸ್ಥಿತಿ ಯನ್ನು ನಿಯಂತ್ರಿಸಿ ವಿಕೋಪಕ್ಕೆ ತಿರುಗದಂತೆ ನೋಡಿಕೊಂಡರು. ಇದೇ  ವೇಳೆ ಕಾರ್ಯಕರ್ತನೋರ್ವ ಸರಕಾರಿ ಬಸ್‌ನ ಗ್ಲಾಸ್‌ಗೆ ಕೈಯಿಂದ ಬಲ ವಾಗಿ ಗುದ್ದಿದ ಪರಿಣಾಮ ಗಾಜು ಪುಡಿಯಾದ ಘಟನೆಯೂ ನಡೆ ಯಿತು. ಆದರೆ ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಹಾಗೂ ಇತರ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿ ಖುದ್ದು ಹಾಜರಿದ್ದು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

Advertisement

ಸಿ.ಟಿ. ರವಿ ಎರಡೆರಡು ಬಾರಿ ಬಂಧನ
ಜ್ಯೋತಿ ಜಂಕ್ಷನ್‌ನಲ್ಲಿ ಬಹಿರಂಗ ಸಭೆಯ ಬಳಿಕ ರ್ಯಾಲಿಯಲ್ಲಿ ಸಾಗಲು ಮುನ್ನುಗ್ಗಿದ ಬಿಜೆಪಿ ಶಾಸಕ ಸಿ.ಟಿ. ರವಿ ಅವರನ್ನು ಪೊಲೀಸರು ಅಲ್ಲಿಯೇ ಬಂಧಿಸಿ ಬಸ್‌ಗೆ ಹತ್ತಿಸಿದ್ದರು. ಆದರೆ ಹಿಂಬಾಗಿಲಿನಿಂದ ನುಸುಳಿ ಹೊರಬಂದ ಅವರು ಬಳಿಕ ಕಾರ್ಯಕರ್ತರೋರ್ವರ ಜತೆ ಮೋಟಾರ್‌ ಬೈಕ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುತ್ತಿಗೆ ಹಾಕಲು ಮುಂದಾದರು. ಆಗ ಅವರನ್ನು ಮತ್ತೆ ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಬಂಧಿಸಿ ಅನಂತರ ಬಿಡುಗಡೆಗೊಳಿಸಿದರು.

ನೆಹರೂ ಮೈದಾನದಲ್ಲಿ  ಸಮಾವೇಶ
ಬೈಕ್‌ ರ್ಯಾಲಿಗೆ ಅನುಮತಿ ನಿರಾಕರಿಸಿದ್ದ ನಗರ ಪೊಲೀಸರು ನೆಹರೂ ಮೈದಾನದಲ್ಲಿ ಪ್ರತಿಭಟನ ಸಮಾವೇಶ ನಡೆಸಲು ಅನುಮತಿ ನೀಡಿದ್ದರು. ಅದರಂತೆ ನೆಹರೂ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ನೆಹರೂ ಮೈದಾನದಲ್ಲಿ ಸಮಾವೇಶಕ್ಕೆ ಯಾವುದೇ ಸಿದ್ಧತೆ ನಡೆಸಿರಲಿಲ್ಲ. ನೆಹರೂ ಮೈದಾನದಲ್ಲಿ ಪ್ರತಿಭಟನ ಸಭೆ ನಡೆಯುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕೆಲವು ಕಾರ್ಯಕರ್ತರು ಅಲ್ಲಿಗೂ ಆಗಮಿಸುತ್ತಿರುವುದು ಕಂಡುಬಂತು. ಇದೇ ವೇಳೆ ನೆಹರೂ ಮೈದಾನದ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಿದ್ದ ಪೊಲೀಸರು ಅಲ್ಲಿಯೂ ಕಾವಲು ಕಾಯುತ್ತಿದ್ದರು. ಮೈದಾನ ದೊಳಗೆ ಅಡ್ಡಾಡುತ್ತಿದ್ದ ಕೆಲವು ಮಂದಿಯನ್ನು ಪೊಲೀಸರು ಅಲ್ಲಿಂದ ಹೊರಗೆ ಕಳುಹಿಸಿದ್ದರು. ಮೈದಾನದ ಪ್ರವೇಶ ದ್ವಾರಗಳನ್ನು ಮುಚ್ಚಿರುವುದನ್ನು ಕಂಡು ಕಾರ್ಯಕರ್ತರು ಅಲ್ಲಿಂದ ಮತ್ತೆ ಜ್ಯೋತಿ ವೃತ್ತದತ್ತ ತೆರಳುತ್ತಿದ್ದರು. ವಿಶೇಷ ಅಂದರೆ ಸಮಾವೇಶ ನಿಗದಿಯಾಗಿದ್ದ ಮೈದಾನವನ್ನು ಪ್ರತಿಭಟನೆ ಮುಗಿದ ಅನಂತರ ಬಂಧಿತರನ್ನು ತಂದು ಬಿಡುವುದಕ್ಕೆ  ಬಳಸಲಾಯಿತು.

ರ್ಯಾಲಿ ಯಶಸ್ವಿ : ನಾಯಕರು
ಜಿಲ್ಲಾಧಿಕಾರಿ ಕಚೇರಿ ಬಳಿ ಬಂಧನದ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪಸಿಂಹ, ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ ಸಭೆಯ ವಿಪಕ್ಷ ಸಚೇ ತಕ ಸುನಿಲ್‌ ಕುಮಾರ್‌, ಶಾಸಕ ಸಿ.ಟಿ. ರವಿ ಅವರು, ಸರಕಾರ ರ್ಯಾಲಿಯನ್ನು ತಡೆಯಲು ಸರ್ವ ಪ್ರಯತ್ನ ನಡೆಸಿದರೂ ಅವೆಲ್ಲವನ್ನೂ ಮೀರಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ರಾಜ್ಯವ್ಯಾಪಿಯಾಗಿ ಹೋರಾಟ ನಡೆಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next