Advertisement

ಬಿಜೆಪಿ ವರಿಷ್ಠರ ನಡೆ ಬಂಡಾಯಕ್ಕೆಡೆ?

05:12 PM Mar 25, 2019 | pallavi |

ರಾಯಚೂರು: ಹಾಲಿ ಸಂಸದ ಬಿ.ವಿ.ನಾಯಕ ಗೆಲುವಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿ ಶೋಧದಲ್ಲಿರುವ ಬಿಜೆಪಿ ವರಿಷ್ಠರ ನಡೆ ಪಕ್ಷದಲ್ಲಿ ಬಂಡಾಯಕ್ಕೆಡೆ ಮಾಡುವ ಸಾಧ್ಯತೆ ಇದೆ. ಪಕ್ಷದ ಮಾಜಿ ಶಾಸಕ ತಿಪ್ಪರಾಜ್‌ ಹವಾಲ್ದಾರ್‌ ಪ್ರಬಲ ಪ್ರಯತ್ನ ನಡೆಸುತ್ತಿದ್ದರೂ, ವಲಸಿಗ ರಾಜಾ ಅಮರೇಶ್ವರ ನಾಯಕ ಹೆಸರು ಕೇಳಿ ಬಂದಿರುವುದು ಇಂಥ ಅನುಮಾನಕ್ಕೆ ಪುಷ್ಟಿ ನೀಡಿದೆ.

Advertisement

ತಿಪ್ಪರಾಜ್‌ ಹವಾಲ್ದಾರ್‌ ಪರ ಪಕ್ಷದ ಕೆಲ ಮುಖಂಡರು ಲಾಬಿ ನಡೆಸಿದರೆ, ಅದೇ ಪಕ್ಷದ ಕೆಲ ನಾಯಕರು ವಿರೋಧಿ ಸಿದ್ದಾರೆ. ರಾಜಾ ಅಮರೇಶ್ವರ ನಾಯಕ ಕಾಂಗ್ರೆಸ್‌ನಿಂದ ವಲಸೆ ಬಂದರೂ ಅವರ ಪರ ಕೆಲಸ ಮಾಡಲು ನಾವು ಸಿದ್ಧ ಎನ್ನುತ್ತಿದ್ದಾರೆ ಕೆಲ ನಾಯಕರು. ಮುಖಂಡರ ಈ ನಡೆ ಮುಂದೆ ಬಂಡಾಯಕ್ಕೆ ನಾಂದಿ ಹಾಡಿದರೂ ಅಚ್ಚರಿ ಪಡಬೇಕಿಲ್ಲ. ರಾಜಾ ಅಮರೇಶ್ವರ ನಾಯಕ ಈ ಹಿಂದೆ ಎರಡು ಬಾರಿ ಸಚಿವರಾಗಿ ಕ್ಷೇತ್ರದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ.

ಅವರ ಸ್ಪರ್ಧೆಯಿಂದ ಹಾಲಿ ಸಂಸದ ಬಿ.ವಿ.ನಾಯಕ ಅವರು ಗೆಲುವಿಗಾಗಿ ತುಸು ಪ್ರಯಾಸಪಡಬೇಕಾಗುತ್ತದೆ. ಆದರೆ, ಟಿಕೆಟ್‌ ಕೈ ತಪ್ಪಿದ ಬೇಸರದಲ್ಲಿಯೋ ಅಥವಾ ಮಾತಿಗೆ ಮನ್ನಣೆ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಬಿಜೆಪಿಯ ಕೆಲ ಮುಖಂಡರು ಪಕ್ಷ ಸಂಘಟನೆಯಿಂದ ದೂರ ಉಳಿಯಬಹುದು. ಆದರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಹಸ ತೋರಲಿಕ್ಕಿಲ್ಲ. ಬದಲಿಗೆ ಪರೋಕ್ಷವಾಗಿ ಪಕ್ಷದ ಅಭ್ಯರ್ಥಿಗೇ ಬೆಂಬಲಿಸದೆ ದೂರ ಉಳಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಹೊಸಬರಿಗೆ ಹೇಗೆ ಕೊಡ್ತೀರಿ?: ರಾಜಾ ಅಮರೇಶ್ವರ ನಾಯಕ ಅವರು ಈಗಾಗಲೇ ಎಲ್ಲ ಪಕ್ಷಗಳಲ್ಲೂ ಒಂದು ಸುತ್ತು ಹಾಕಿದ್ದಾರೆ. ಬಿಜೆಪಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂರು ಪಕ್ಷಗಳಲ್ಲೂ ಅವರ ಹೆಜ್ಜೆ ಗುರುತುಗಳಿವೆ. 2009ರ ಲೋಕಸಭೆ ಚುನಾವಣೆ ವೇಳೆಯೂ ಬಿಜೆಪಿ ಅವರಿಗೆ ಬಿ ಫಾರಂ ನೀಡಿತ್ತು ಎನ್ನಲಾಗುತ್ತಿದೆ. ಆದರೆ, ಗಣಿ ಧಣಿಗಳ ಹಣ ದರ್ಪದಿಂದ ಅವರು ಕಣದಿಂದ ಹಿಂದೆ ಸರಿದರು ಎನ್ನುತ್ತವೆ ಮೂಲಗಳು. ಆದರೆ, ಈಗ ಮತ್ತದೇ ಬಿಜೆಪಿ ಅವರಿಗೆ ರತ್ನಗಂಬಳಿ ಹಾಕಿರುವುದು ಪಕ್ಷದ ಮುಖಂಡರ ಮುನಿಸಿಗೆ ಕಾರಣವಾಗಿದೆ. ನಾವು ಪಕ್ಷಕ್ಕಾಗಿ ವರ್ಷಾನುಗಟ್ಟಲೇ ದುಡಿದಿದ್ದೇವೆ. ನಮ್ಮನ್ನು ಬಿಟ್ಟು ಹೊಸಬರಿಗೆ ಕರೆದು ಟಿಕೆಟ್‌ ನೀಡುವುದು ಎಷ್ಟು ಸರಿ ಎಂದು ವಾದಿಸುತ್ತಿದ್ದಾರೆ.

ಸಿದ್ಧಾಂತಕ್ಕಿಂತ ಸಂಖ್ಯೆ ಮುಖ್ಯ: ಬಿಜೆಪಿಗೆ ಈಗ ಪಕ್ಷ ಸಿದ್ಧಾಂತಗಳಿಗಿಂತ ಗೆಲುವು ಮುಖ್ಯ ಎನ್ನುವಂತಾಗಿದೆ. ಜೆಡಿಎಸ್‌ ಕಾಂಗ್ರೆಸ್‌ ದೋಸ್ತಿ ವಿರುದ್ಧ ರಾಜ್ಯದ ವಿವಿಧೆಡೆ ಪ್ರಯೋಗಿಸಿದ ಅಸ್ತ್ರ ಇಲ್ಲಿಯೂ ಪ್ರಯೋಗಿಸಲು ಮುಂದಾಗಿದೆ. ಕಾಂಗ್ರೆಸ್‌ ವಲಸಿಗರಿಗೆ ಟಿಕೆಟ್‌ ಕೊಟ್ಟಲ್ಲಿ ಮತ ವಿಭಜನೆಗೊಂಡು ಬಿಜೆಪಿಗೆ ವರವಾಗಲಿದೆ ಎನ್ನುವ ಲೆಕ್ಕಾಚಾರವಿದೆ.

Advertisement

ರಾಜಾ ಅಮರೇಶ್ವರ ನಾಯಕ ಕಲ್ಮಲ ಕ್ಷೇತ್ರ, ಲಿಂಗಸುಗೂರು ಕ್ಷೇತ್ರದಿಂದ ಶಾಸಕರಾದವರು. ಸುರಪುರ, ಶಹಾಪುರ ಭಾಗದಲ್ಲಿ ಜನರೊಂದಿಗೆ ಒಡನಾಟ ಹೊಂದಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದರು ಎನ್ನುವುದು ಅವರಿಗೆ ಹಿನ್ನಡೆ ಉಂಟು ಮಾಡಬಹುದು. ಒಟ್ಟಾರೆ ಬಿಜೆಪಿಗೂ ಬಂಡಾಯ ಸವಾಲು ಎದುರಾಗುವ ಲಕ್ಷಣಗಳಂತೂ ಇವೆ. ಆದರೆ, ಅದನ್ನು ವರಿಷ್ಠರು ಹೇಗೆ ಶಮನಗೊಳಿಸುವರೋ ಕಾದು ನೋಡಬೇಕು.

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next