ಭೋಪಾಲ್: ಮದ್ಯದಂಗಡಿಗಳ ನಿಷೇಧಕ್ಕೆ ಆಗ್ರಹಿಸುತ್ತಿರುವ ಮಾಜಿ ಕೇಂದ್ರ ಸಚಿವೆ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ಭೋಪಾಲ್ ನಲ್ಲಿ ಕಲ್ಲು ಎಸೆದು ಮದ್ಯದಂಗಡಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಉಮಾ ಭಾರತಿ ಅವರು ಮಧ್ಯ ಪ್ರದೇಶದಲ್ಲಿ ನಿಷೇಧಕ್ಕೆ ಆಗ್ರಹಿಸುತ್ತಿದ್ದು, ಮದ್ಯದಂಗಡಿಗಳ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.
ಒಂದು ವಾರದೊಳಗೆ ಮದ್ಯದಂಗಡಿ ಮುಚ್ಚುವಂತೆ ಸ್ಥಳೀಯ ಆಡಳಿತಕ್ಕೆ ತಾಕೀತು ಮಾಡಿರುವುದಾಗಿ ಬಿಜೆಪಿ ನಾಯಕಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೆನಡಾ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐವರು ಭಾರತೀಯ ವಿದ್ಯಾರ್ಥಿಗಳು!
“ಬರ್ಖೇಡಾ ಪಠಾನಿ ಪ್ರದೇಶದಲ್ಲಿ ಕಾರ್ಮಿಕರ ಕಾಲೋನಿಯಲ್ಲಿ ಹಲವಾರು ಮದ್ಯದ ಅಂಗಡಿಗಳಿವೆ, ಅಲ್ಲಿ ಮದ್ಯವನ್ನು ‘ಅಹತಾ’ (ಸುತ್ತುವರಿದ ಜಾಗ) ನಲ್ಲಿ ನೀಡಲಾಗುತ್ತದೆ. ಈ ಅಂಗಡಿಗಳಲ್ಲಿ ಕೂಲಿ ಕಾರ್ಮಿಕರ ಹಣ ಪೋಲಾಗುತ್ತದೆ. ಸರಕಾರದ ನೀತಿಗೆ ವಿರುದ್ಧವಾಗಿ ಮದ್ಯದಂಗಡಿ ಇರುವುದರಿಂದ ಇಲ್ಲಿನ ನಿವಾಸಿಗಳು, ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆಯೂ ಅಂಗಡಿ ಮುಚ್ಚುವುದಾಗಿ ಆಡಳಿತ ಮಂಡಳಿ ಹಲವು ಬಾರಿ ಭರವಸೆ ನೀಡಿತ್ತು. ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ ”ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. ವಿಡಿಯೋವನ್ನು ಸ್ವತಃ ಹಂಚಿಕೊಂಡಿದ್ದಾರೆ.
“ಇಂದು ಮಧ್ಯದಂಗಡಿಯನ್ನು ಒಂದು ವಾರದಲ್ಲಿ ಮುಚ್ಚುವಂತೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದೇನೆ” ಎಂದು ಅವರು ಹೇಳಿದರು.