ಇಂಪಾಲ್ (ಮಣಿಪುರ) : ಹಾಡಹಗಲೇ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಮಣಿಪುರದ ತೌಬಲ್ ಜಿಲ್ಲೆ ಮಂಗಳವಾರ (ಜ.24 ರಂದು) ನಡೆದಿದ್ದು, ಈ ಸಂಬಂಧ ಕೃತ್ಯದ ಪ್ರಮುಖ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಮಾಜಿ ಸೈನಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ನಾಯಕ ಲೈಶ್ರಾಮ್ ರಾಮೇಶ್ವರ್ ಸಿಂಗ್( 50) ಹತ್ಯೆಗೀಡಾದ ನಾಯಕ.
ಘಟನೆ ವಿವರ: ನೋಂದಣಿ ಸಂಖ್ಯೆ ಇಲ್ಲದ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಮಂಗಳವಾರ ರಾಮೇಶ್ವರ್ ಸಿಂಗ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಎದೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ರಾಮೇಶ್ವರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಪೊಲೀಸರು ವಾಹನ ಚಲಾಯಿಸುತ್ತಿದ್ದ ನವೋರೆಮ್ ರಿಕಿ ಪಾಟಿಂಗ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ.
ಇದಾದ ಬಳಿಕ ಕೃತ್ಯದ ಪ್ರಮುಖ ರೂವಾರಿ 46 ವರ್ಷದ ಅಯೆಕ್‌ಪಾಮ್ ಕೇಶೋರ್ಜಿತ್ ಎಂಬಾತನಿಗೆ ತೀವ್ರ ಶೋಧ ನಡೆಸಿ, ಎಲ್ಲೇ ಇದ್ದರೂ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಕೆಲ ಸಮಯದ ಬಳಿಕ ನಂತರ ಪ್ರಮುಖ ಇಂಫಾಲ್ ಪಶ್ಚಿಮ ಜಿಲ್ಲೆಯ ಕಮಾಂಡೋ ಕಾಂಪ್ಲೆಕ್ಸ್‌ನಲ್ಲಿ ಪೊಲೀಸರ ಮುಂದೆ ಶರಣಾದ್ದಾನೆ. ಬಂಧಿತನಿಂದ 32 ಕ್ಯಾಲಿಬರ್ ನ ಪರವಾನಗಿ ಪಡೆದ ಪಿಸ್ತೂಲ್, ಎರಡುಮ್ಯಾಗಜಿನ್ ಮತ್ತು ಒಂಬತ್ತು ಕಾರ್ಟ್ರಿಜ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯ ಯಾಕೆ ನಡೆಸಿದ್ದಾರೆ ಎನ್ನುವುದರ ಕುರಿತು ತನಿಖೆ ನಡೆಯುತ್ತಿದೆ.