ಹೊಸದಿಲ್ಲಿ: ತಮಗೆ ಅಕ್ಬರ್ ಆಲಂ ಎಂಬಾತನಿಂದ ಜೀವ ಬೆದರಿಕೆಯ ಇಮೇಲ್ ಬಂದಿದೆ ಎಂದು ದಿಲ್ಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೋಮವಾರ ಆರೋಪಿಸಿದ್ದಾರೆ. ಈ ಕುರಿತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
“ಕಪಿಲ್ ಮಿಶ್ರಾ ಭಯೋತ್ಪಾದಕ, ನಿನಗೆ ನಾವು ಹೆಚ್ಚು ದಿನ ಬದುಕಲು ಬಿಡಲ್ಲ. ನಿನ್ನನ್ನು ಗುಂಡು ಹಾರಿಸಿ ಕೊಲ್ಲಲು ನನ್ನ ಜನ ಎಲ್ಲ ಸಿದ್ಧತೆ ನಡೆಸಿದ್ದಾರೆ’ ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ. ಇದನ್ನು ಮಿಶ್ರಾ ಅವರು ದಿಲ್ಲಿ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ.
ಶನಿವಾರವಷ್ಟೇ ಮಿಶ್ರಾ ಅವರು ರಾಜಸ್ಥಾನದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್ ಕುಟುಂಬವನ್ನು ಭೇಟಿಯಾಗಿ, ವಿವಿಧ ಮೂಲಗಳಿಂದ ಸಂಗ್ರಹಿಸಲಾದ 1 ಕೋಟಿ ರೂ.ಗಳನ್ನು ಹಸ್ತಾಂತರಿಸಿದ್ದರು.