Advertisement

ಕ್ಷೇತ್ರದಲ್ಲಿ ಪಕ್ಷ ಪುನಶ್ಚೇತನಕ್ಕೆ ಬದ್ಧ:ರೆಡ್ಡಿ

04:02 PM May 20, 2023 | Team Udayavani |

ಬಂಗಾರಪೇಟೆ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ನಾರಾಯಣಸ್ವಾಮಿ ಮತದಾನಕ್ಕೂ ಮುನ್ನವೇ ಚುನಾವಣಾ ಕಣದಿಂದ ಹಿಂದೆ ಸರಿದ ಪರಿಣಾಮ, ಕ್ಷೇತ್ರದಲ್ಲಿ ಬಿಜೆಪಿ ಪ್ರಶ್ನೆ ಮಾಡಿಕೊಳ್ಳುವಂತಹ ದುಸ್ಥಿತಿ ನಿರ್ಮಾಣವಾಗಿದೆ. ನಿಷ್ಠಾವಂತ ಕಾರ್ಯಕರ್ತರು ಕ್ಷೇತ್ರದಲ್ಲಿ ತಲೆ ಎತ್ತಲು ಸಾಧ್ಯವಾಗದಂತಹ ಸ್ಥಿತಿ ಗೋಚರಿಸುತ್ತಿದೆ. ಆದರೆ, ಯಾವುದೇ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ . ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುವುದ ರೊಂದಿಗೆ ಪುನಶ್ಚೇತನಗೊಳಿಸಲಾಗುವುದು ಎಂದು ಬಿಜೆಪಿ ಮುಖಂಡ ಗೋಲ್ಡ್ ರೆಡ್ಡಿ ಹೇಳಿದರು.

Advertisement

ಪಟ್ಟಣದ ವಿಬಿಆರ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಸರ್ವಾಧಿಕಾರಿ ಧೋರಣೆಯ ಫ‌ಲದಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಕ್ರಿಯಾತ್ಮಕವಾಗಿ ಸಂಘಟನೆ ಆಗಲಿಲ್ಲ. ಇನ್ನಾದರೂ ನಾಯಕರು ಎಲ್ಲಾ ಕಾರ್ಯಕರ್ತರನ್ನು ಓಮ್ಮತದೊಂದಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ಮುಂದಾಗಬೇಕು ಎಂದರು.

ಹಣ, ಜಾತಿ ಲೆಕ್ಕಾಷಾರದಲ್ಲಿ ಪಕ್ಷ ವಿಭಜನೆ ಬೇಡ: ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಕಠಿಣ ಪರಿಶ್ರಮ, ತ್ಯಾಗ, ಮನೋಬಲದ, ಆಧಾರದ ಮೇಲೆ ರೂಪಿತವಾದ ಪಕ್ಷವಾಗಿದೆ. ಇಲ್ಲಿಯ ಸ್ಥಳೀಯ ನಾಯಕರು ವಲಸಿಗರಿಗೆ ಪಕ್ಷ ಸಿದ್ಧಾಂತವೇ ಅರಿಯದ ವಲಸಿಗ ನಾಯಕರಿಗೆ ರೆಡ್‌ ಕಾರ್ಪರೇಟ್‌ ಹಾಕುವುದು ಮತ್ತು ಹಣ, ಜಾತಿ ಲೆಕ್ಕಾಚಾರದಲ್ಲಿ ಪಕ್ಷ ವಿಭಜನೆ ಮಾಡುವುದು ಸೂಕ್ತವಲ್ಲ. ನಾಯಕರು ಬಂದಾಗ ಫ್ಲೆಕ್ಸ್‌ ರಾಜಕಾರಣ ಮಾಡುವುದನ್ನು ಬಿಟ್ಟು ,ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮನ ಮನೆಗಳಿಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.

ಪಕ್ಷ ಸಂಘಟನೆಗೆ ಮುಂದಾಗಿ: ಕಾಂಗ್ರೆಸ್‌ ಪಕ್ಷ ಟೊಳ್ಳು ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದ ಪರಿಣಾಮ ಜನರು ಮತದಾನ ಮಾಡಿದ್ದಾರೆ. ಆದರೆ, ಈ ಭರವಸೆಗಳನ್ನು ಈಡೇರಿಸುವುದು ಕಷ್ಟಸಾಧ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ನಂತರ ಈ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುವುದು ವಾಸ್ತವ. ಇದರೊಂದಿಗೆ ಸರ್ಕಾರ ಜನಾಭಿಪ್ರಾಯದಿಂದ ದೂರವಾಗಲಿದೆ, ರಾಜ್ಯದಲ್ಲಿ ಉಪಚುನಾವಣೆ ಪರ್ವ ಬರಲಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ತಮ್ಮಲ್ಲಿ ಗುಪ್ತವಾಗಿ ಅಡಗಿರುವ ಆಕ್ರೋಶವನ್ನು ಸಂಘಟನಾತ್ಮಕವಾಗಿ ಪಕ್ಷ ಬಲಿಷ್ಠಗೊಳಿಸಬೇಕು. ರಾಜ್ಯದಲ್ಲಿ ಮತ್ತೂಮ್ಮೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಸ್ವಾರ್ಥಕ್ಕಾಗಿ ಪಕ್ಷ ಬಳಕೆ ಬೇಡ: ಬಿಜೆಪಿ ಪಕ್ಷದ ವೇದಿಕೆಯಲ್ಲಿ ಬರುವಂತಹ ಮುಂಚೂಣಿ ನಾಯಕರ ತಮ್ಮ ಸ್ವಾರ್ಥ ರಾಜಕಾರಣವನ್ನು ತೊರೆದು ಎಲ್ಲಾ ನಿಷ್ಠಾವಂತ ಕಾರ್ಯಕರ್ತರನ್ನು ದಮನ ಮಾಡುವ ಗೋಜಿಗೆ ಹೋಗದೆ, ಪಕ್ಷ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಜಕೀಯ ಭವಿಷ್ಯವನ್ನು ಪ್ರೇರೇಪಿಸುವ ಕೆಲಸ ಆಗಬೇಕು. ಇಲ್ಲವಾದಲ್ಲಿ ಬಿಜೆಪಿ ಕಾರ್ಯಕರ್ತರ ಪಕ್ಷವೇ ಹೊರತು ನಾಯಕರ ಪಕ್ಷವಲ್ಲ. ನಿಮಗೆ ಸಂಘಟನೆ ಮಾಡಲು ಆಗದೆ ಹೋದಲ್ಲಿ ರಾಜೀನಾಮೆ ನೀಡಿ ಹೊರ ನಡೆಯಿರಿ. ನಾವು ಸಂಘಟಿಸಿ ಮತ್ತೂಮ್ಮೆ ಕ್ಷೇತ್ರದಲ್ಲಿ ಕಮಲ ಅರಳಿಸುತ್ತೇವೆ ಎಂದು ಗುಡುಗಿದರು.

Advertisement

ಬಿಜೆಪಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ 18 ರಿಂದ 30 ವರ್ಷ ವಯೋಮಾನದ ಎ ಲ್ಲಾ ವಿದ್ಯಾರ್ಥಿನಿ ಮತ್ತು ಮಹಿಳಾ ಮತದಾರರಿಗೆ ಉಚಿತವಾಗಿ ದ್ವಿಚಕ್ರ ಹಾಗೂ ಲಘು ವಾಹನ ಚಾಲನಾ ತರಬೇತಿ ನೀಡಲಾಗುವುದು. ಆಸಕ್ತಿಯುಳ್ಳ ಮತದಾರರು ಆಗಸ್ಟ್‌ 1 ರ ಒಳಗಾಗಿ ದೂರವಾಣಿ ಸಂಖ್ಯೆ 91410 91410 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಮನವಿ. ಈ ಸಂದರ್ಭದಲ್ಲಿ ಸುಪ್ರೀಂ ವೆಂಕಟೇಶ್, ವಿನೋದ್‌ ಕುಮಾರ್‌ ಜೈನ್‌, ಗಂಗಾಧರ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next