Advertisement

ಪ್ರೇಮಸೌಧಕ್ಕೂ ವಿವಾದ: ತಾಜ್‌ನ 20 ಕೊಠಡಿಗಳ ಬಾಗಿಲು ತೆರೆಯುವಂತೆ ಕೋರಿ ಅರ್ಜಿ

10:39 AM May 09, 2022 | Team Udayavani |

ಲಕ್ನೋ: ಉತ್ತರಪ್ರದೇಶದ ಜ್ಞಾನವ್ಯಾಪಿ ಮಸೀದಿ ಸುದ್ದಿಮಾಡುತ್ತಿರುವಂತೆಯೇ ಈಗ ಹೊಸ ವಿವಾದವೊಂದು ಆಗ್ರಾದ ಪ್ರೇಮಸೌಧ ತಾಜ್‌ಮಹಲ್‌ನ ಬಾಗಿಲು ತಟ್ಟಿದೆ.

Advertisement

ತಾಜ್‌ಮಹಲ್‌ನ ಒಂದು ಭಾಗದಲ್ಲಿ ಹಿಂದಿನಿಂದಲೂ ಮುಚ್ಚಲಾಗಿರುವ 20 ಕೊಠಡಿಗಳ ಬಾಗಿಲು ತೆಗೆಸಬೇಕು ಎಂದು ಕೋರಿ ಅಯೋಧೆಯ ಬಿಜೆಪಿ ನಾಯಕ ಡಾ.ರಜನೀಶ್‌ ಸಿಂಗ್‌ ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಕೊಠಡಿಗಳಿಗೆ ಯಾರಿಗೂ ಪ್ರವೇಶವಿಲ್ಲ. ಅಲ್ಲಿ ಹಿಂದೂ ದೇವರ ವಿಗ್ರಹಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವುಗಳ ಬಾಗಿಲು ತೆರೆಯುವಂತೆ ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಸಂಸ್ಥೆಗೆ ನಿರ್ದೇಶನ ನೀಡಬೇಕು. ಕೊಠಡಿಗಳ ಒಳಗೆ ಹಿಂದೂ ದೇವ-ದೇವತೆಯರ ಮೂರ್ತಿಗಳನ್ನು ಮುಚ್ಚಿಡಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಅವುಗಳನ್ನು ತೆರೆಯುವುದರಿಂದ ಯಾವ ವಿವಾದವೂ ಉಂಟಾಗುವುದಿಲ್ಲ. ಸದ್ಯ ಎದ್ದಿರುವ ಸಂಶಯಗಳಿಗೆ ತೆರೆ ಬೀಳಲಿದೆ ಎಂದೂ ಹೇಳಿದ್ದಾರೆ.

2020ರಲ್ಲಿ ಕೂಡ ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಕೊಠಡಿಗಳ ಬಗ್ಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರೂ ಯಾವ ಪ್ರಯೋಜನವೂ ಆಗಿರಲಿಲ್ಲ ಎಂದಿದ್ದಾರೆ.

ಜ್ಞಾನವ್ಯಾಪಿ ವಿವಾದಕ್ಕೆ ಹೊಸ ತಿರುವು
ವಾರಾಣಸಿಯ ಜ್ಞಾನವ್ಯಾಪಿ ಮಸೀದಿ-ಶೃಂಗಾರ ಗೌರಿ ವಿವಾದಕ್ಕೆ ಭಾನುವಾರ ಹೊಸ ತಿರುವು ಸಿಕ್ಕಿದೆ. ಅಲ್ಲಿ ದೈನಂದಿನ ಪೂಜೆ, ಪುನಸ್ಕಾರಕ್ಕೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ತಾವು ಹಿಂಪಡೆಯುತ್ತಿರುವುದಾಗಿ ಐವರು ಅರ್ಜಿದಾರರ ಪರ ನಿಂತಿದ್ದ ಎನ್‌ಜಿಒ ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್‌ ಬಿಸೇನ್‌ ಭಾನುವಾರ ಘೋಷಿಸಿದ್ದಾರೆ. ಆದರೆ, ತಮ್ಮ ನಿರ್ಧಾರಕ್ಕೆ ಕಾರಣವೇನು ಎಂದು ಅವರು ತಿಳಿಸಿಲ್ಲ. ಆದರೆ, ಅವರ ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದ ನಾಲ್ವರು ಅರ್ಜಿದಾರ ಮಹಿಳೆಯರಾದ ಸೀತಾ ಸಾಹು, ಮಂಜು ವ್ಯಾಸ್‌, ರೇಖಾ ಪಾಠಕ್‌ ಮತ್ತು ಲಕ್ಷ್ಮೀದೇವಿ, “ನಾವು ಅರ್ಜಿಗಳನ್ನು ವಾಪಸ್‌ ಪಡೆಯಲ್ಲ, ಕೊನೆಯ ತನಕವೂ ಈ ಕೇಸಿನಲ್ಲಿ ಹೋರಾಡುತ್ತೇವೆ’ ಎಂದಿದ್ದಾರೆ. 5ನೇ ಅರ್ಜಿದಾರರಾದ ರಾಖೀ ಸಿಂಗ್‌ ಅವರು ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿರಲಿಲ್ಲ.

Advertisement

ಪ್ರಾಚೀನ ಸ್ವಸ್ತಿಕ ಪತ್ತೆ
ಶನಿವಾರ ನಡೆದ ಸಮೀಕ್ಷೆ ಮತ್ತು ವಿಡಿಯೋಗ್ರಫಿ ಪ್ರಕ್ರಿಯೆ ವೇಳೆ ಜ್ಞಾನವ್ಯಾಪಿ ಮಸೀದಿಯ ಸಂಕೀರ್ಣದ ಪಕ್ಕದಲ್ಲೇ ಎರಡು ಪ್ರಾಚೀನ ಸ್ವಸ್ತಿಕ ಚಿಹ್ನೆಗಳು ಪತ್ತೆಯಾಗಿವೆ. ಆದರೆ, ಅಷ್ಟರಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 9ರಂದು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕಣದ ಮುಂದಿನ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next