Advertisement

ಬಿಜೆಪಿ ಮುಖಂಡನ ಹತ್ಯೆ ಖಂಡಿಸಿ ಪ್ರತಿಭಟನೆ

11:40 AM Mar 17, 2017 | |

ಬೆಂಗಳೂರು: ಬೊಮ್ಮನಹಳ್ಳಿ ಪುರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್‌ (ಕಿತ್ತನಾಗಹಳ್ಳಿ ವಾಸು) ಹತ್ಯೆ ಖಂಡಿಸಿ ಬಿಜೆಪಿ ವತಿಯಿಂದ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಏಕಾಏಕಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಮುಖಂಡರು ಮತ್ತು ಕಾರ್ಯ­ಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್‌.ಅಶೋಕ್‌, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಿಜೆಪಿ ಮುಖಂಡ ಕಿತ್ತಗಾನಹಳ್ಳಿ ವಾಸು ಹತ್ಯೆಯಲ್ಲಿ ಆನೇಕಲ ಶಾಸಕರ ಕೈವಾಡವಿರುವ ಶಂಕೆಯಿದ್ದು, ನಿಜವಾದ ಆರೋಪಿಗಳನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಮಾತನಾಡಿ, ಶ್ರೀನಿವಾಸ ಪ್ರಸಾದ್‌ ಹತ್ಯೆಗೆ ಪೊಲೀಸ್‌ ಇಲಾಖೆ ವೈಫ‌ಲ್ಯವೇ ಕಾರಣ. ಹತ್ಯೆ ಹಿಂದೆ ಅಲ್ಲಿನ ಸ್ಥಳೀಯ ಶಾಸಕರ ಕುಮ್ಮಕ್ಕಿದೆ. ವಾಸು ಅವರು ಶಾಸಕರ ಹಲವು ಭ್ರಷ್ಟಾಚಾರಗಳನ್ನು ಬಯಲಿಗೆಳೆದಿದ್ದರು. ಇದರಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ, ಶಾಸಕರಾದ ವೈ.ಎ.ನಾರಾಯಣ ಸ್ವಾಮಿ, ಮಾಜಿ ಶಾಸಕರಾದ ನಿರ್ಮಲ್‌ ಕುಮಾರ್‌ ಸುರಾನ, ನಾರಾಯಣ ಸ್ವಾಮಿ, ಅಬ್ದುಲ ಅಜೀಂ, ಮುಖಂಡರಾದ ಪಿ.ಎನ್‌.ಸದಾಶಿವ, ಎಸ್‌. ಮುನಿರಾಜು ಮತ್ತಿತರರು ಭಾಗವಹಿಸಿದ್ದರು.

Advertisement

ಸಂಚಾರ ಅಸ್ತವ್ಯಸ್ತ
ಪ್ರತಿಭಟನಾನಿರತರು ಏಕಾಏಕಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಆ ಭಾಗದಲ್ಲಿ ಸ್ವಲ್ಪ ಹೊತ್ತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಕೆ.ಜಿ.ರಸ್ತೆ, ಕಾರ್ಪೋರೇಷನ್‌ ವೃತ್ತ, ಕೆ.ಆರ್‌.ವೃತ್ತ, ಮೆಜೆಸ್ಟಿಕ್‌ ಮುಂತಾದ ಕಡೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಪ್ರತಿಭಟನಾಕಾರರನ್ನು ಬಂಧಿಸಿ ಅಲ್ಲಿಂದ ಕರೆದೊಯ್ದ ಬಳಿಕ ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಸಾಕಷ್ಟು ಹೊತ್ತು ಕಸರತ್ತು ನಡೆಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next