ರಾಮನಗರ: ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಪುತ್ರಿ ನಿಶಾ ಅವರು ಇತ್ತೀಚೆಗೆ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಅವರು ಕಾಂಗ್ರೆಸ್ ಸೇರಲಿದ್ದಾರೆ.
ಕೆಲವು ತಿಂಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ನಿಶಾ ಭೇಟಿ ಮಾಡಿದ್ದರು. ಬಳಿಕ ಬಿಎಂಐಸಿಪಿ ಅಧ್ಯಕ್ಷರಾಗಿ ಚನ್ನಪಟ್ಟಣ ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ಅಧಿಕಾರ ಸ್ವೀಕಾರ ಸಮಯದಲ್ಲಿ ಸಂಸದ ಡಿ.ಕೆ.ಸುರೇಶ್ ಜತೆಗೆ ಕಾಣಿಸಿಕೊಂಡು ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿ ಕೊಟ್ಟಿದ್ದರು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ಸೇರ್ಪಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕಾಂಗ್ರೆಸ್ ಸೇರಲು ತಂದೆಯ ಸಹಮತವಿದೆ ಎಂದರು.
ಚನ್ನಪಟ್ಟಣದಿಂದ ಸ್ಪರ್ಧಿಸಲು ಸಿದ್ಧ: ನಿಶಾ
ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿದರೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳುವ ಮೂಲಕ ನಿಶಾ ಅವರು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಹಾಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಅವರು ಪ್ರತಿನಿಧಿಸುತ್ತಿರುವ ಚನ್ನಪಟ್ಟಣದಲ್ಲಿ ಉಪಚುನಾವಣೆ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅವರ ಪುತ್ರಿಯ ಕಾಂಗ್ರೆಸ್ ಸೇರ್ಪಡೆ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ.