Advertisement

BJP-JDS 19 ಸಂಸದರಿದ್ರೂ ಬಜೆಟ್‌ನಲ್ಲಿ ರಾಜ್ಯಕ್ಕೆ ನಾಮ: ಎಂ.ಲಕ್ಷ್ಮಣ್‌

08:50 PM Jul 24, 2024 | Team Udayavani |

ಮೈಸೂರು: ಕರ್ನಾಟಕದಿಂದ ಮೈತ್ರಿ ಪಕ್ಷಗಳ 19 ಸಂಸದರು ಆಯ್ಕೆಯಾಗಿದ್ದರೂ ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಕೊಟ್ಟಿರುವುದು ಚೊಂಬು, ನಾಮ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ವಾಗ್ಧಾಳಿ ನಡೆಸಿದರು.

Advertisement

ನಗರದ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಅವರ 3.0 ಸರ್ಕಾರ ಮಂಡಿಸಿರುವ ಬಜೆಟ್‌ ಕುರ್ಚಿ ಬಚಾವೊ ಬಜೆಟ್‌ ಆಗಿದೆ. ಮೋದಿಯವರು ಪ್ರಧಾನಿ ಸ್ಥಾನ ಭದ್ರಪಡಿಸಿಕೊಳ್ಳಲು ಆಂಧ್ರ, ಬಿಹಾರ ಮುಖ್ಯಮಂತ್ರಿಗಳ ಓಲೈಸಿಕೊಳ್ಳಲು ಅವರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಯತ್ನ:
ಕರ್ನಾಟಕ ರಾಜ್ಯದಿಂದ 17 ಬಿಜೆಪಿ ಸಂಸದರು, ಇಬ್ಬರು ಜೆಡಿಎಸ್‌ ಸಂಸದರು ಸೇರಿ 19 ಸಂಸದರನ್ನು ಮೋದಿ ಸರ್ಕಾರಕ್ಕೆ ರಾಜ್ಯದ ಜನತೆ ಕೊಟ್ಟಿದ್ದಾರೆ. ಪ್ರತಿವರ್ಷ ರಾಜ್ಯದಿಂದ 4.5 ಲಕ್ಷ ಕೋಟಿ ರೂ. ಕೇಂದ್ರಕ್ಕೆ ತೆರಿಗೆ ಸಂಗ್ರಹ ಮಾಡಿಕೊಡುತ್ತಿದ್ದೇವೆ. ಆದರೆ ಅವರು ರಾಜ್ಯಕ್ಕೆ ಕೊಟ್ಟಿರುವುದು ಚೊಂಬು ಮತ್ತು ನಾಮ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

43 ಸಾವಿರ ಕೋಟಿ ರೂ. ಮೀಸಲು:
ಬಿಜೆಪಿ ನಾಯಕರಾದ ಆರ್‌.ಅಶೋಕ್‌, ಸಿ.ಟಿ.ರವಿ, ಯತ್ನಾಳ್‌ ಎಸ್ಸಿ-ಎಸ್ಟಿಗಳ ಬಗ್ಗೆ ಬಹಳ ಪ್ರೀತಿ ಇರುವವರ ರೀತಿ ಮಾತನಾಡುತ್ತಾರೆ. ಈ ಕೇಂದ್ರ ಬಜೆಟ್‌ನಲ್ಲಿ ಕೇವಲ 56 ಸಾವಿರ ಕೋಟಿ ರೂ. ಮಾತ್ರ ಮೀಸಲಿಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಸಮುದಾಯಗಳ ಅಭಿವೃದ್ಧಿಗೆ 43 ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಎಂದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌, ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌, ಮುಖಂಡರಾದ ವಾಸು, ಬಿ.ಎಂ.ರಾಮು, ಸೋಮಶೇಖರ್‌,  ಮಾಧ್ಯಮ ವಕ್ತಾರ ಮಹೇಶ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next