ಬೆಂಗಳೂರು: ರೌಡಿ ಶೀಟರ್‌ಗಳ ಪಕ್ಷ ಸೇರ್ಪಡೆ ಹಾಗೂ ಪಕ್ಷದ ವೇದಿಕೆಯಲ್ಲಿ ಕುಖ್ಯಾತ ರೌಡಿಗಳ ಉಪಸ್ಥಿತಿಯಿಂದ ಇಮೇಜ್ ಕುಸಿತಗೊಂಡಿರುವ ಬಗ್ಗೆ ನಡೆಯುತ್ತಿರುವ ಚರ್ಚೆಯಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಈಗ ವಿಭಾಗ ಮಟ್ಟದಲ್ಲಿ ಸ್ಕ್ರೀನಿಂಗ್ ಕಮಿಟಿಗಳನ್ನು ರಚಿಸಲು ಚಿಂತನೆ ನಡೆಸಿದೆ.
ಫೈಟರ್ ರವಿ ಪಕ್ಷ ಸೇರ್ಪಡೆ ಹಾಗೂ ಸೈಲೆಂಟ್ ಸುನೀಲ್ ಜತೆ ಬಿಜೆಪಿ ಸಚಿವರು ಹಾಗೂ ಸಂಸದರು ವೇದಿಕೆ ಹಂಚಿಕೊಂಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಆರ್.ಅಶೋಕ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಫೈಟರ್ ರವಿ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು. ಇದಾದ ಹತ್ತು ವರ್ಷದಲ್ಲಿ ಅದೇ ವ್ಯಕ್ತಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಎಷ್ಟು ಸರಿ? ಎಂಬ ಪ್ರಶ್ನೆ ಪಕ್ಷದ ವಲಯದಲ್ಲೇ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ವಿಭಾಗವಾರು ಸ್ಕ್ರೀನಿಂಗ್ ಕಮಿಟಿ ರಚನೆ ಮಾಡಬೇಕೆಂಬ ಪ್ರಸ್ತಾಪ ಕೇಳಿ ಬಂದಿದೆ.
ಡಿಸೆಂಬರ್ 8ರ ನಂತರ ಬಿಜೆಪಿ ಸಂಘಟನಾತ್ಮಕವಾಗಿ ಇನ್ನಷ್ಟು ಚಟುವಟಿಕೆ ನಡೆಸಲಿದೆ. ಪಕ್ಷ ಸೇರ್ಪಡೆ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲು ಸೂಚನೆ ನೀಡಲಾಗಿದೆ. ಆಗ ಸಮಾಜ ವಿರೋಧಿ ಚಟುವಟಿಕೆ ನಡೆಸಿದವರಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಯಾವುದೇ ಕಾರಣಕ್ಕೂ ಕೇಳಿ ಬರಬಾರದು. ಹೀಗಾಗಿ ಪ್ರತಿಯೊಬ್ಬರ ಹಿನ್ನೆಲೆ ಶೋಧಿಸುವಂತೆ ಹಿರಿಯರು ಸೂಚನೆ ನೀಡಿದ್ದಾರೆ. ಹೀಗಾಗಿ ವಿಭಾಗಮಟ್ಟದಲ್ಲಿ ಸ್ಕ್ರೀನಿಂಗ್ ಕಮಿಟಿ ರಚನೆಯಾಗಲಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೇ ಇರುವ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬೆಂಗಳೂರಿಗೆ ಆಗಮಿಸಿದ ಬಳಿಕ ಈ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರೌಡಿಗಳ ಪಕ್ಷ ಸೇರ್ಪಡೆ ಪ್ರಯತ್ನ ಈಗಾಗಲೇ ವರಿಷ್ಠರ ಗಮನಕ್ಕೆ ಬಂದಿದ್ದು, ಒಂದಿಷ್ಟು ಶಿಸ್ತನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಲಿದೆ.